Friday, October 12, 2018


Image may contain: 2 people, drawing



ಅವರೇಕೆ ಆರಿಸಿದರು ಬಶೀರ ನಮ್ಮ ಮನೆಯ ಬೆಳಕನ್ನ
ಇರಿದು ಕೊಂದರೇಕೆ ನಡು‌ ಬೀದಿಯಲಿ ನಮ್ಮನ್ನ
ಏನಿದೆ ನಮ್ಮಲ್ಲಿ ಅವರ ಕ್ರೂರತನಕ್ಕೆ ಕಾರಣ
ಧರ್ಮ ಕೇಳಿತೆ ನಮ್ಮ ಅವಸಾನ..?
ನೋಡಲ್ಲಿ ನನ್ನ ಹೆತ್ತಬ್ಬೆ ರೋಧಿಸುತಿಹಳು
ನಿನ್ನಾಕೆ ನಿನ್ನ ದಾರಿಗೆ ಪರಿತಪಿಸುತಿಹಳು
ಕೇಳುತಿದೆಯೇ ನಿನಗೆ ನನ್ನ ಸಹೋದರನ ಮೂಕ ರೋಧನೆ
ಕಾಣುತಿದೆಯೇ ನಿನ್ನ ಮಕ್ಕಳ ವೇದನೆ
ಅಗೋ ನೋಡಲ್ಲಿ ಸಂಘಟನೆಗಳು ಬೀದಿಗಿಳಿದಿವೆ
ಗೋಸುಂಬೆಗಳ ಬಾಯಿಯಿಂದ ಪುಂಖಾನುಪುಂಗ ಭಾಷಣ ಉದುರುತಿದೆ
ಸುದ್ದಿ ವ್ಯಭಿಚಾರಿಗಳು ಬಣ್ಣ ಹಚ್ಚುತಿವೆ
ಶಾಂತಿ ನೆಪದಲ್ಲಿ ಬೇಳೆ ಬೇಯಿಸುತಿವೆ
ಅಲ್ಲಾಹು ಬಯಸಿದನೇ ಎನ್ನ ಸಾವನ್ನು
ಶ್ರೀ ರಾಮ ಕೇಳಿದನೇ ನಿನ್ನ ಉಸಿರನ್ನು
ಅವರೇಕೆ ಬಯಸಿದರು ನಮ್ಮ ರಕ್ತವನ್ನು
ಯಾರಿಗೆ ಬಯಸಿದೆವು ನಾವು ಕೆಡುಕನ್ನು
ಧರ್ಮ ಉಳಿಸಲು ನನ್ನ ಹತ್ಯೆಯಂತೆ
ನಿನ್ನ ಸಾವು ನನ್ನ ಬಲಿದಾನಕ್ಕೆ ಪ್ರತಿಕಾರವಂತೆ
ಕಂಡಿಲ್ಲವೇನೋ ಅವರು ರಕ್ತದ ಬಣ್ಣ
ಇಲ್ಲವಾದರೆ ತರೆಯುತಿದ್ದರು ಪಾಪಿಗಳು ಅವರ ಕಣ್ಣ.
ಎಲ್ಲಾ ಅಳಿದ ಮೇಲೆ ನಾವೀಗ ಹುತಾತ್ಮರು
ರಾಜಕೀಯದ ಅಮಲಿನಲಿ ಬೊಬ್ಬಿಡುತಿರುವರು ಹುಂಬರು
ನನ್ನ ಸಾವು ಕೆಸರಿನೆಡೆಯಿಂದ ಕಮಲವರಳಿಸುತಿದೆ
ನಿನ್ನ ಹತ್ಯೆ ಸೊಟ್ಟಗಿದ್ದ ಕೈ ಯನ್ನು ನೆಟ್ಟಗಾಗಿಸುತಿದೆ
ರಾಜೇಶ್

No comments:

Post a Comment