Friday, October 12, 2018

ವರ್ಷವಿಡೀ ಮಳೆಯಿಲ್ಲ
ಕುಡಿಯಲು ಹನಿ ನೀರಿಲ್ಲ
ಇಂತಹ ಸನ್ನಿವೇಶಕ್ಕೆ ಕಾಲ ದೂರವಿಲ್ಲ
ಅನುಭವಿಸಲಿದ್ದೇವೆ ನಾವು ನಮ್ಮ ಪಾಪದ ಫಲ
ಅಳಿಯುತಿದೆ ಕಾನನ
ಏರುತಿದೆ ತಾಪಮಾನ
ಮುಂದೊಂದು ದಿನ ಈ ಭೂಮಂಡಲವಾಗಬಹುದು ಸ್ಮಶಾನ...!
ಯಾಕೆ ಹರಿಯುತ್ತಿಲ್ಲ ಭವಿಷ್ಯದೆಡೆಗೆ ನಮ್ಮ ಜ್ಞಾನ...?
ಶುಭ್ರ ಗಂಗೆ ಕೆಡುತಿದ್ದಾಳೆ
ಪ್ರಕೃತಿ ಮಾತೆ ಬರಿದಾಗುತಿದ್ದಾಳೆ
ಈಗ ಎಲ್ಲಿದೆ ನಮ್ಮ ಆ ಪ್ರಕೃತಿಯ ಸೊಬಗು..?
ಮುಂದೆ ಭಿತ್ತಿ ಚಿತ್ರದಲ್ಲಿ ನೋಡಬೇಕೆನೋ ನಮ್ಮ ಮಗು ...!
ಬಳಸುತಿದ್ದೇವೆ ಅಸಂಖ್ಯಾತ ಮೋಟಾರು ಕಾರು
ಬೆಳೆಯುತ್ತಿದೆ ಕಾರ್ಖಾನೆಗಳೆಂಬ ರಾಕ್ಷಸರು
ಇವುಗಳು ಉಗುಳುತ್ತಿವೆ ಕರಿ ಹೊಗೆ ಬೂದಿ...
ಹೀಗೆ ಕಟ್ಟಿಕೊಳ್ಳುತಿದ್ದೇವೆ ನಾವೆ ನಮ್ಮ ಸಮಾಧಿ...!
ಕಾಲ ಮಿಂಚಿಲ್ಲ ಸ್ವಲ್ಪ ಕಣ್ತೆರೆದು ನೋಡಿ..
ಆದಷ್ಟು ಮಾಲಿನ್ಯ ಕಡಿಮೆ ಮಾಡಿ
ನಮ್ಮ ಗುಂಡಿಯನ್ನು ನಾವೆ ತೋಡುತ್ತ
ಯಾಕೆ ನಡೆಯಬೇಕು ಬದುಕಿನ ಬಂಡಿ ಸಾಗಿಸುತ್ತ...?
 ರಾಜೇಶ್
ಮತ್ತೆ ಬಂದೀತೇ ಆ ನನ್ನ ದಿನಗಳು ....?
ಮನದಲ್ಲಿ ಇಂದಿಗೂ ಅಚ್ಚಾಗಿರುವ ನೆನಪುಗಳು
ನೋವು ನಲಿವಿಗೆ ಜತೆಗಿದ್ದ ಹೈಕಳು
ಅರಿವಿಲ್ಲದೆ ಕಳೆದು ಹೋಗುತಿದ್ದ ಬೇಸಿಗೆ ರಜೆಗಳು ..!
ಮತ್ತೆ ಬಂದೀತೇ ಆ ನನ್ನ ದಿನಗಳು...?
ಲಂಗು ಲಗಾಮಿಲ್ಲದೆ ಆಡಿದ ಆಟಗಳು
ಮರದಿಂದ ಮರಕ್ಕೆ ಕಟ್ಟಿದ ಜೋಕಾಲಿಗಳು
ಬಯಲಲ್ಲಿ ಕಟ್ಟಿದ ದೇವರ ಗುಡಿಗಳು ....!
ಮತ್ತೆ ಬಂದೀತೇ ಆ ನನ್ನ ದಿನಗಳು...?
ಅಜ್ಜಿ ಹೇಳಿದ ನೀತಿ ಕತೆಗಳು
ಅಜ್ಜನ ಮಾದುರ್ಯ ತುಂಬಿದ ಪದಗಳು
ಸ್ವಚ್ಛ ಪರಿಸರದಲ್ಲಿ ನವಿಲು ಕೋಗಿಲೆಗಳ ಗಾನಗಳು ...!
ಎಲ್ಲಿಂದ ಬಂದೀತು ನನ್ನ ಆ ದಿನಗಳು ..?
ಕತೆ ಹೇಳುವ ಅಜ್ಜಿಯ ಮಾತು ಮೌನವಾಗಿದೆ
ಪದ ಹಾಡುವ ಅಜ್ಜನ ಗಂಟಲು ಕೆಟ್ಟು ಹೋಗಿದೆ
ಇನ್ನು ನವಿಲು ಕೋಗಿಲೆ ....!
ಎಲ್ಲಿದೆ ಅವುಗಳಿಗೆ ಇಲ್ಲಿ ನೆಲೆ ...... ?
ಹೇಗೆ ಬಂದೀತು ನನ್ನ ಆ ದಿನಗಳು ... ?
ಜೋಕಾಲಿ ಕಟ್ಟಲು ಮರಗಳ ಹುಡುಕುವುದೆಲ್ಲಿ
ಎಲ್ಲಿ ನೋಡಿದರೂ ಈ ಪರಿಸರ ಖಾಲಿ ಖಾಲಿ .....!
ಅವುಗಳೇನಿದ್ದರೂ ನೆನಪು ಈ ಸುಡುವ ಬಿಸಿಲಿನಲ್ಲಿ ...!
ಹೇಗೆ ಮರುಕಳೀಸಿತು ನನ್ನ ಆ ದಿನಗಳು ... ?
ಶುರುವಾಯಿತೆಂದರೆ ಈ ಕೆಟ್ಟ ಸಮ್ಮರು
ಈಗೇನಿದ್ದರೂ ಕ್ಯಾಂಪ್ ಗಳದ್ದೇ ದರ್ಬಾರು
ಹೇಗೆ ನೆನಪಾದೀತು ಅಜ್ಜಿ ಮನೆಯ ಹೆಸರು ..?
ಸ್ಪರ್ಧಾ ಜಗತ್ತಿನಲ್ಲಿ ಬಿಗಿ ಹಿಡಿದಿದೆ ನನ್ನ ಉಸಿರು ..... !
ರಾಜೇಶ್
ಮುಂಗಾರು ಮುತ್ತಿಕ್ಕುತ್ತಿರಲು
ಮೇಘಗಳು ನಾಚಿ ನೀರಾಗಲು
ಧರೆ ಹರುಷದಿ ಸ್ವಾಗತಿಸಲು
ಮೌನ ಮನವೊಂದು ಸದ್ದಿಲ್ಲದೆ ಸಾಗುತಿದೆ
ನಿನ್ನ ಬಣ್ಣದ ಕೊಡೆಯಾಸರೆಗೆ
ಬಣ್ಣ ತುಂಬಿದ ಕನಸುಗಳೊಂದಿಗೆ
ನಿನ್ನ ಬಣ್ಣದ ಕೊಡೆಯಾಸರೆಯಲ್ಲಿ
ಮುದ್ದಾದ ಆ ನಿನ್ನ ಹೆಜ್ಜೆ ಗುರುತುಗಳಲ್ಲಿ
ಆ ಹೆಜ್ಜೆಗೊಂದು ಕನಸು ನಾ ಸಾಗುವ ದಾರಿಯಲ್ಲಿ
ಅನು ಕ್ಷಣ ಮರೆಯಾಗದಿರು ಈ ಪುಟ್ಟ ಹೃದಯದಲಿ
ನಾ ಮುಂಗಾರು ನೀ ಮೇಘ
ದಯಪಾಲಿಸು ನಿನ್ನ ಹೃದಯದಲ್ಲಿ ಸ್ವಲ್ಪ ಜಾಗ
ಹಾಡಿ ಕುಣಿಯುತಿದೆ ನನ್ನ ಮನವೀಗ
ಪ್ರೇಮ ಕವಿತೆಗೆ ದನಿಗೂಡಿಸು ನಿನ್ನ ಸವಿರಾಗ
ನನ್ನ ಕನಸುಗಳಿಗೆ ಬಣ್ಣ ಹಚ್ಚಿದವಳು ನೀನು
ಆ ಕನಸುಗಳ ಲೋಕವೆ ನಿನ್ನ ಕಣ್ಣು
ನನಗಾಗಿ ಬ್ರಹ್ಮನು ಸೃಷ್ಟಿಸಿದ ಕರಾವಳಿ ಹೆಣ್ಣು
ನಿನ್ನ ವರ್ಣಿಸಲು ಪದಗಳಿವೆ ಇನ್ನೂ ಏನೇನೂ
ಕನಸಿನ ಲೋಕವೇ ಈ ಪ್ರೇಮ
ಪಿಸು ಮಾತುಗಳ ರಾಗವೆ ಇಲ್ಲಿ ಸರಿಗಮ
ಎರಡು ಪುಟ್ಟ ಹೃದಯಗಳ ಸಂಗಮ
ಕೂಡಿ ಬಾಳಿದರೆ ಪ್ರೇಮ ಅನುಪಮ..!
 ರಾಜೇಶ್ ( ,ಈ ಕವಿತೆಯಲ್ಲಿ ಬರುವ ಎಲ್ಲಾ ಪಾತ್ರಗಳು ಕಾಲ್ಪನಿಕ)
ಒಂದೆಡೆ ಪಾಪಿ ಪಾಕಿಸ್ತಾನ
ಇನ್ನೊಂದೆಡೆ ಕಪಟಿ ಚೀನಾ
ನಡುವೆ ಇಡುತಿದ್ದೀರಿ ನೀವು ಮಾತೆಯ ಮಡಿಲಿಗೆ ಗುನ್ನ
ಒಟ್ಟಾಗಿ ಕಂಗೆಡಿಸುತಿದ್ದೀರಿ ನೀವು ಅವಳನ್ನ
ಆಕೆಯ ಅಡಿಯಿಂದ ಮುಡಿಯವರೆಗೆ
ಮಾಡಿದ್ದೀರಿ ನೀವು ಸುಲಿಗೆ
ಇನ್ನೂ ಯಾಕೆ ನಿಮಗೆ ಅವಳ ಮೇಲೆ ಹಗೆ
ಅವಳ ರಕ್ಷಣೆಗೆ ನಿಂತ ನಮ್ಮನ್ನು ಬಿಡುತಿಲ್ಲ ನಿಮ್ಮ ಧಗೆ ..!
ಬಂಧು ಬಳಗ ತೊರೆದು ಬಂದಿದ್ದೇವೆ
ಕಣ್ ಮುಚ್ಚದೆ ಮಾಡುತಿದ್ದೇವೆ ನಿಮ್ಮ ಸೇವೆ..!
ನಮ್ಮಲ್ಲೂ ನಿಮ್ಮ ಕೊಳಕು ರಾಜಕೀಯವೆ ..?
ಹೀಗೆ ನಡೆದರೆ ಶತ್ರುಗೆ ಬಲಿಯಾಗೋದು ನಾಳೆ ನಾವೆ.!
ಕೊರೆವ ಚಳಿ ಲೆಕ್ಕಕ್ಕಿಲ್ಲ ಎನಗೆ
ಉರಿವ ಬಿಸಿಲು ಭಂಗ ತರಲಿಲ್ಲ ನೆಮ್ಮದಿಗೆ
ನಿಮ್ಮ ಕೊಳಕು ಮಾತು ಕೇಳಿ ಒಮ್ಮೆಗೆ
ಧೃತಿಗೆಡಿಸಿತು ಧೈರ್ಯ ಮೆಲ್ಲಗೆ.!
ರಾಜಕೀಯದ ದಾಳವಾಗಿಸದಿರಿ ಎನ್ನ
ಪ್ರೀತಿಯಿಂದ ಪೊರೆವೆನು ನಿಮ್ಮನ್ನ..!
ತಪ್ಪಿ ನಡೆದರೆ ನಿಮ್ಮ ನಡೆಯನ್ನ
ಕರುಣಿಸಲಾರ ದೇವ ಒಳ್ಳೆ ಮರಣವನ್ನ ..!
ಪಕ್ಷ ಪಂಥಗಳು ನಿಮ್ಮೊಳಗಿರಲಿ
ನಿಮ್ಮ ಕಾಯೊ ಪಹರೆ ಬಗ್ಗೆ ಅಭಿಮಾನವಿರಲಿ
ಭವ್ಯ ಭಾರತ ಒಂದಾಗಿರಲಿ
ಬಡಪಾಯಿ ಯೋಧನ ಮೊಗದಲ್ಲಿ ನಗುವರಳಲಿ ...!
ರಾಜೇಶ್
#stand_with_Indian_army
ದೇಶ ಕಾಯುತ್ತಿದೆ
ಮನಸು ತುಡಿಯುತಿದೆ
ಕದನ ಕಲಿಗಳ ಮುಡಿಗೆ
ವಿಜಯ ಕಿರೀಟ ಕಾಯುತ್ತಿದೆ..!
ಬದ್ಧ ವೈರಿಗಳ ಕಲಹ
ಸಾಗಿ ಬಂದ ದಾರಿ ಹಲವು ತರಹ
ಅಲ್ಲಿ ಏನಿದ್ದರೂ ನಮ್ಮದೆ ಹವಾ
ಗೆಲುವೆಂಬುದು ಅವರಿಗೆ ಸ್ವಾಹ ಸ್ವಾಹ ...!
ವಿಜಯದ ನಗುವಿಗಿರುವುದು ಒಂದೇ ಮೆಟ್ಟಿಲು
ಹುಮ್ಮಸ್ಸು ತುಂಬಿದೆ ವಿಜಯದ ಶಿಖರವೇರಲು
ತರೆದಿಲ್ಲ ನಿಮಗೆ ವಿಜಯದ ಬಾಗಿಲು
ವಿಜಯದ ವಿರಾಟ ರೂಪಕ್ಕೆ ನೀವಾಗುತ್ತೀರಿ ಕಂಗಾಲು
ಕೋಟಿ ಹೃದಯಗಳು ಆಶಿಸುತಿರಲಿ
ವಿರಾಟನು ಅಲ್ಲಿ ವೀರನಾಗಲಿ
ಯುವರಾಜನು ಮಹಾರಾಜನಾಗಲಿ
ಗೆಲುವಿನ ದೋಣಿ ದಡ ಸೇರಲಿ...!
ಭಾರತ ಮಾತೆಯ ಮೊಗದಲ್ಲಿ
ರವಿಯು ಚಿತ್ತಾರ ಮೂಡಿಸಲಿ
ರೋಹಿತನು ಗೆಲುವಿನ ಭುವನ ನಿರ್ಮಿಸಲಿ
ಯಾದವ ಜಾಧವರು ಪಾಕಿಗಳ ಕಂಗೆಡಿಸಲಿ...!
ಗೆಲುವು ಕಸಿವ ಪಾಂಡಿತ್ಯರು ನಾವು
ಜನ್ಮ ಭೂಮಿಗೆ ಸಂಪ್ರಿತಿಯಿಂದ ಹೋರಾಡುವೆವು ..!
ಅರ್ಪಿಸಿ ಮಾತೆಯ ಪಾದಕ್ಕೆ ಗೆಲುವು ..!
ಜತೆ ನಿಂತು ಜೈಕಾರ ಹಾಕುವೆವು ನಾವು ...!
ರಾಜೇಶ್

No automatic alt text available.


ಉಸಿರಾಡೋ ಗಾಳಿಯೂ ಸುಳ್ಳಾಡುತಿದೆ..
ಮೆಲ್ಲ ಮೆಲ್ಲಗೆ ಎದೆ ಬಡಿತವೂ ವಂಚಿಸುತಿದೆ
ಮತ್ತೆ ಮತ್ತೆಗಳಲ್ಲಿ ಮಾತು ಕೊನೆಯಾಗುತಿದೆ
ವಿಷಯ ವಿಷಮ ದಾರಿದ್ರ್ಯ ಕಾಡುತಿದೆ
ಪ್ರೀತಿ ಮರುಳೋ ನಾ ಮರುಳೋ..
ಇಲ್ಲ ಯೌವನದ ಅರಳು ಮರುಳೋ...
ಕಾರಣವಿಲ್ಲದೆ ಹತ್ತಿರವಾದಳು ಅವಳು
ಪ್ರೇಮ ಪಾಶದಿ ಹೃದಯಕ್ಕೆ ಸಿಕ್ಕಿತು ಉರುಳು
ಕವಿತೆಯಲ್ಲಿ ವರ್ಣಿಸಿದೆ
ಕನಸು ಗಳಲ್ಲಿ ಬಂಧಿಸಿದೆ
ಕಂಡ ಕನಸುಗಳಲ್ಲೇ ಆಶಾಗೋಪುರ ನಿರ್ಮಿಸಿದೆ
ಕೊನೆಗೂ ಪಾಪಿ ಹೃದಯದಿ ಬಚ್ಚಿಡಲು ಸೋತು ಹೋದೆ..!
ಅಂದುಕೊಂಡೆ ಕನಸುಗಳಿಗೆ ಬೇಲಿ ಹಾಕೊರ್ಯಾರು...?
ಕನಸ ಹಾದಿಗೆ ಮುಳ್ಳು ತುಂಬಿದ ವಿಧಿಯಾಟ ಬಲ್ಲವರಾರು...?
ಅವಳ ವಿಳಾಸವಿಲ್ಲದ ಅಲೆಮಾರಿ ನಾನ್ಯಾರು..?
ಮೂಕ ಹಕ್ಕಿಯ ರೋಧನೆ‌ ಇಲ್ಲಿ ಕೇಳೋರ್ಯಾರು..?
ಕವಿತೆ : ಕಲ್ಪನೆಗೆ ನಿಲುಕಿದ್ದು
ಚಿತ್ರ ಕೃಪೆ : ಕದ್ದಿದ್ದು
Image may contain: sky


ಹಾರಿ ಹೋಗು ಪಾರಿವಾಳವೆ
ಸುಮ್ಮನೇಕೆ ಕುಳಿತಿರುವೆ
ಹೇಳು ಹೋಗು ನನ್ನವಳಿಗೆ
ಈ ಪುಟ್ಟ ಹೃದಯದ ಕೋರಿಕೆ ..!
ನೀ ಅರುಹುವೆಯ ಅವಳ ಕಿವಿಗೆ
ನನ್ನ ಈ ಹಳಿ ತಪ್ಪಿದ ಜೀವದ ಬಯಕೆ
ನನ್ನ ಪಿಸು ಮಾತಿಗೆ ಕಿವಿಯಾಗುವೆಯಾ ಪಾರಿವಾಳವೆ..?
ಕಣ್ಣೀರ ಸಂದೇಶಕ್ಕೆ ನೀ ವರದಿಗಾರನಾಗುವೆ .!
ಹೇಳು ಹೋಗು ಪಾರಿವಾಳವೆ ನನ್ನ ಮನದೆನ್ನೆಗೆ
ಅವಳು ಕೊಟ್ಟ ನವಿಲು ಗರಿ
ಮರಿ ಹಾಕಿಲ್ಲವೆಂದು
ಅವಳೊಂದಿಗಿನ ನೆನಪುಗಳು ಬಣ್ಣ ಮಾಸಿಲ್ಲವೆಂದು
ಕಂಡ ಕನಸುಗಳು ಮಾತ್ರ ಕಮರಿ ಹೋಗಿವೆಯೆಂದು..!
ಹೇಳು ಹೋಗು ಪಾರಿವಾಳವೆ ನನ್ನ ಮನದ ದೇವತೆಗೆ
ಅವಳ ಸೌಂದರ್ಯ ಕಂಡ ಕಣ್ಣುಗಳು ಮುಸುಕಾಗಿವೆಯೆಂದು
ಅವಳ ವರ್ಣಿಸಿ ಬರೆದ ಕೈಗಳು ನಡುಗುತಿವೆಯೆಂದು
ಅಂದು ತುಂಬಿದ ಹೃದಯ ಸಂಪತ್ತು ಬರಿದಾಗಿಲ್ಲವೆಂದು
ತಿಳಿ ಹೇಳು ಹೋಗು ಪಾರಿವಾಳವೆ
ಸುಳ್ಳು ಮಾತುಗಳು ಅವಳಿಗೆ ಬರುವುದಿಲ್ಲವೆಂದು
ಅಂದು ಅವಳಾಡಿದ ಮಾತೊಂದು
ನಿಜವಾಗಲಿಲ್ಲ ಅಂದಿನಿಂದ ಇಂದು
ನಾ ಕಂಡಿಲ್ಲ ಈ ಜಗದಿ ಅವಳು ಹೇಳಿದ ಅವಳಿಗಿಂತ ಒಳ್ಳೆಯ ಹುಡುಗಿ ಎಂದೆಂದೂ...!
ಕವಿತೆ: ಕಾಲ್ಪನಿಕ
ಚಿತ್ರ ಕೃಪೆ : ಗೂಗಲ್

Image may contain: drawing


ಸೃಷ್ಟಿಯ ಮೂಲ ಅನ್ನುತ್ತಾರೆ ನನ್ನ
ಅನ್ನುತ್ತಾರೆ ಕರುಣೆ ವಾತ್ಸಲ್ಯದ ಸಂಪನ್ನ
ವರ್ಣಿಸುವರು ಭೂಮಿ ತೂಕದ ತಾಳ್ಮೆ ನಿನ್ನ
ಇವೆಲ್ಲವೂ ನನ್ನ ಹೆಸರಿಗಿರುವ ಬಿರುದು ಸನ್ಮಾನ..!
ಆಗಸದಾಚೆ ಹಾರಿ ಬಂದಿರುವೆ
ಸಾಗರದ ಆಳ ಕಂಡಿರುವೆ
ಹೆಸರೆತ್ತಿದರೆ ನನ್ನ ಅಬಲೆಯೆನ್ನದಿರಿ..
ನನಗೂ ಗೊತ್ತಿದೆ ಬದುಕಿನ ದಾರಿ
ಸಂಸಾರದ ಸರಿಗಮ ನಾನು
ನೀವಲ್ಲವೇ ಹೇಳಿದ್ದು ಸಮಾಜದ ಕಣ್ಣು ನೀನು
ಕಲ್ಯಾಣ ಸಬಲೀಕರಣ ಇನ್ನೂ ಏನೇನೋ..
ಆದರೂ ಕೇಳತ್ತಿಲ್ಲ ನನ್ನ ದುಃಖ ನಿಮಗಿನ್ನೂ...
ಅಂದು ಮನುವೂ ವಿರೋಧಿಸಿದ ಎನ್ನ
ದುರುಳ ರಾವಣನು ಕಾಡಿದ್ದ ನನ್ನ
ಕುತಂತ್ರಿ ಶಕುನಿಯೂ ಮಾಡಿದ ಅವಮಾನ..
ಇಂದೂ ಕೆಲ ಪಿಶಾಚಿಗಳು ತೆಗೆಯುತ್ತಿವೆ ಎನ್ನ ಮಾನ ಪ್ರಾಣ...!
ನಡು ರಾತ್ರಿ ಅಳೆಯುವ ಹಂಬಲವಿಲ್ಲ ನನಗೆ
ಆದರೆ ಅಡ್ಡಿಯಾಗದಿರಿ ಎನ್ನ ಗುರಿಯೆಡೆಗೆ
ನಿಮ್ಮ ಸಬಲೀಕರಣ ಭಾಷಣಕ್ಕೆ ಬೀಳಲಿ ಮಣ್ಣು
ಕೊನೆಗೂ ಹೆಸರು ಹೇಳಲು ಮರೆತೆ ನಾನು "ಹೆಣ್ಣು"
ಕವಿತೆ :- ಕಾಲ್ಪನಿಕ
ಚಿತ್ರ ಕೃಪೆ : ಅಂತರ್ಜಾಲ
Image may contain: 1 person, text


ಪೊಣ್ಣೆ ನಿನ್ನ ಕಣ್ಣ ಸೆರೆಕ್ ಯಾನ್ ಮರ್ಲಾಯೆ ..!
ನವಿಲ ನಾಟ್ಯ ರಾಣಿಗ್ ಸೋತು ಪೋಯೆ..!
ಕೋಗಿಲೆ ಕಂಠದ ಬಂಗಾರಿ ದೂರ ದಾಯೆ..?
ರಾತ್ರಿ ಪಗೆಲ್ ತೆರಿಯಂದಿಲೆಕ ಮಲ್ತ್ಂಡ್ ನಿನ್ನ ಮಾಯೆ ..!
ಪುಣ್ಣಮೆದ ಚಂದಿರೆ ನಿನ್ನ ಪೊರ್ಲು ತೂದು..!
ಮುಗುರು ತೆಲಿಕೆ ತೆಲಿತೊಂದುಲ್ಲೆ ಖುಷಿ ಆದ್ ..!
ದಾಯೆ ಪೊಣ್ಣೆ ದೂರ ಪೋಪ ಎಂಕ್ ಮರೆಯಾದ್ ..!
ಆ ಚಂದಿರಗೆ ಸ್ಪರ್ಧಿ ಯಾನ್ ನಿಕ್ಕಾದ್ .!
ನಿನ್ನ ಕಾರ ಗೆಜ್ಜೆ ಶಬ್ದಗ್ ದ್ವನಿ ಯಾನ್ ...!
ನೀಲ ರಾಶಿ ಕೇಶಗ್ ಪೊರ್ಲು ಪುರ್ಪು ಯಾನ್ ..!
ನಿನ್ನ ರಾಶಿ ಕನಸ್ ಗ್ ರಾಜೆ ಯಾನ್ ..!
ನಿನ್ನ ಉಡಲ ದೀಪಗ್ ಬೊಲ್ಪು ಯಾನ್ ..!
ಎನ್ನ ಉಡಲ ಬಾನೋಡು..
ನಿಕ್ ಎಲ್ಯ ಒಂಜಿ ಬೂಡು...
ಕಟ್ ದ್ ಕುಲ್ದೆ ಪೊನ್ನೆ ನಿಕ್
ಎನ್ನ ಮೋಕೆ ಕಾವಲು ಅಯಿಕ್
ಕರಿದ್ ಪೋತೆ ಎನನ್ ಯಾನ್..!
ತೂಯಿಬೊಕ್ಕ ನಿನನ್ ಯಾನ್...!
ಬೇಗ ಬತ್ ದ್ ಸೇರ್ ಎನನ್
ಮೋಕೆಡ್ ಬುಲೆಪಾವೆ ಎನ್ನ ದೇವತೆನ್ ..!
ತುಳು ಮಣ್ಣ್ ದ ಮಗೆ ಯಾನ್..!
ಬುಡುದು ಕೊರಯೆ ಪೊಣ್ಣೆ ನಿನನ್...!
ಒರಿಪಾಲ ಎನ್ನ ಕನನ್ ..
ಕಣ್ ರೆಪ್ಪೆದಲೆಕ ತೂಪೆ ಎನ್ನ ರಾಣಿನ್ ..!
ಕವಿತೆ : ಕಲ್ಪನೆ
ಚಿತ್ರ : ಅಂತರ್ಜಾಲ

Image may contain: 1 person



ನೀ ಮೊದಲ ಮಳೆಯಾದರೆ
ನಾ ಭುವಿಯಾಗಬಾರದೆ ಚೆಲುವೆ
ಬರಸೆಳೆದು ಅಪ್ಪಿಕೊಳ್ಳುವೆ
ಬರಡು ಹೃದಯದಿ
ಪ್ರೇಮ ಚಿಲುಮೆ ಹರಿಸಿ
ಹಸನಾಗಿಸಿದಾಗ...!
ನೀ ತಂಗಾಳಿಯಾದರೆ
ನಾ ಮರವಾಗಬಾರದೆ ಚೆಲುವೆ
ಬೀಸೋ ಗಾಳಿಯ ಸಂಭ್ರಮದಿ ಸ್ವಾಗತಿಸಿ
ಎದೆಯಾಳದಿ ಬಚ್ಚಿಡುವೆ
ಮುದ್ದಾಡಿ ಸಂತೈಸಿ..!
ನೀ ನಕ್ಕರೆ ನಗುವುದೆನ್ನ ಹೃದಯ
ಪ್ರೀತಿ ಕಂಗಳು ನೀಡುವುದೆನಗೆ ಅಭಯ
ಜೊತೆಯಿರುವೆ ಎಂದು.,.
ಬಾಳ ಸಂಜೆಗೆ ಬೆಳಕಾಗುವೆಯೆಂದು...!
ನನ್ನ ನಗುವಿಗೆ ಆದಿಯೂ ನೀನೆ
ಅಂತ್ಯವೂ ನೀನೆ..!
ನೀ ಜೊತೆಯಿದ್ದರೆ ಈ ಜೀವ ನಗುವಿನ ಹೊನಲು.!
ತೊರೆದೆಯಾದರೆ ಅದು ದುಖದ ಕಡಲು.,.!
ಒಂದೇ ದೋಣಿಯ ನಾವಿಕರಿಗೇಕೆ
ದೂರದ ತೀರ ಸೇರುವ ಭಯ...!
ತಂಗಾಳಿಯು ಬಿರುಗಾಳಿಯಾಗದು..!
ನೀ‌ಜೊತೆಗಿದ್ದರೆ ಪ್ರತಿ ಸಮಯ .!
ಕವಿತೆ : ಕಲ್ಪನೆ
ಚಿತ್ರ : ಅಂತರ್ಜಾಲ

Image may contain: one or more people and night


ಅರಿವಿಲ್ಲದೆ ಗೀಚಿದ ಸಾಲುಗಳು
ಬರೆವ ಲೇಖನಿಗೆ ಕವನವಾಯಿತು
ಅಕ್ಷರಗಳು ಬಿಳಿ ಹಾಳೆಗೆ ಮುತ್ತಿಕ್ಕಲು
ಮನದ ಭಾವನೆಗಳು ಜಾತ್ರೆ ಹೊರಟಿತು..!
ನೀಳ ಜಡೆ ಕೈಯಲ್ಲೊಂದು ಬಣ್ಣದ ಕೊಡೆ
ನವಿರಾದ ಆ ನಿನ್ನ ನಡೆ
ಮೆಲ್ಲಗೆ ನೀ ಬಳಿ ಬಂದೊಡೆ
ಮರೆತು ಹೋದೆ ನನ್ನ ನಾ ನಿನ್ನ ಮೊಗವ ಕಂಡೊಡೆ..!
ನಿನ್ನ ಮುದ್ದು ಮಾತುಗಳು
ಕಚಗುಳಿ ಇಡುವ ಆ ನಿನ್ನ ನಗು
ಹಣೆಯ ಮೇಲೆ ಚಿತ್ತಾರ ಬಿಡಿಸಿದ ಬೆವರ ಹನಿಗಳು
ನೀ ಹೇಳಿದ ಆ ಕವಿತೆ ಸಾಲುಗಳು
ಮನದಿ‌ಅಚ್ಚೊತ್ತಿದೆ ಮರೆಯಲಾಗದ ನೆನಪುಗಳು...!
ಯಾವ ಜನ್ಮದ ಬಂಧವೋ
ಗೆಳತಿಯಾಗಿ ಆಕೆ ಬಳಿ ಬಂದಳು
ಅಮವಾಸ್ಯೆಯಂದು ಸಿಕ್ಕಿದವಳು
ಚಂದಿರಗೆ ಸ್ಪರ್ಧಿ ನನ್ನವಳು ...!🌝
ಕವಿತೆ : ಕಲ್ಪನೆ
ಚಿತ್ರ : ಅಂತರ್ಜಾಲ


Image may contain: 1 person, closeup


ಅವಳ ಬಗ್ಗೆ ಹೇಳ ಬೇಕಿದೆ
ಹೇಗಿರಲಿ ಆಕೆಗೆ ಸಾಂತ್ವನ ಹೇಳದೆ
ಆಕೆಯ ಕಷ್ಟ ಕಂಡು ಮನಸು ಬೇಸರಿಸಿದೆ
ಗಟ್ಟಿ ಗಿತ್ತಿ ಉಳಿದಿದ್ದಾಳೆ ಇಂದೂ ಸೋಲದೆ...!
ದುಃಖದ ಇನ್ನೊಂದು ಹೆಸರು ಅವಳು
ಆಕೆಯ ಜೀವನವೇ ಕಣ್ಣೀರ ಕಡಲು
ಕೌಟುಂಬಿಕ ಕುತಂತ್ರಕ್ಕೆ ಸಿಲುಕಿ ನಲುಗಿದವಳು
ಕನಸಲ್ಲೂ ಪರರಿಗೆ ಕೇಡು ಬಯಸದವಳು
ಘೋರ ಖಾಯಿಲೆಯ ಗೆದ್ದು ಬಂದವಳು
ಗಂಡನನ್ನೇ ಬಿಟ್ಟು ಕೊಟ್ಟ ಉದಾರಿ ಅವಳು
ಕಾಡು ಮೇಡಿನಲ್ಲಿ ಅಳೆದವಳು
ವಿಷ ಸರ್ಪದ ಪ್ರೀತಿ ಗೆದ್ದವಳು
ಸಾವು ಹೆದರಿ ದೂರವಾಗಿದೆ
ಆದರೆ ಆಕೆಯ ವ್ಯಥೆ ಮಾತ್ರ ಮುಂದುವರಿದಿದೆ
ಕಥೆಗೆ ಕೊನೆಯೆಂಬುದು ಇಲ್ಲವಾಗಿದೆ
ನಮ್ಮ ಮಹಿಳಾ ಮಣಿಗಳ ಸಮಯ ಸಾಗುತಿದೆ..!
ಎಲ್ಲವನ್ನೂ ಎದುರಿಸಿದ ದಿಟ್ಟ ನಾರಿ
ಅವಳ ಬಿಟ್ಟು ಕೊಡುವುದು ನಾವು ಎಷ್ಟು ಸರಿ..?
ಅನ್ನಬೇಕಿದೆ ಮನದೊಳಗೆ ನಾನು ಗೌರಿ..
ನಾವೆಲ್ಲರೂ ಪುಟ್ಟ ಗೌರಿ..😊🙍

Image may contain: 1 person



ನೀಳ ಕಣ್ಗಳು ಕಾಡುತಿವೆ
ಕಿರು ನಗೆ‌ ಮನವ ಮರ್ಕಟಗೊಳಿಸಿದೆ
ಮಧು ತುಂಬಿದ ಕೆಂದುಟಿಗಳು
ಕಚ್ಚಿ ಬಿಡಲೇ ಮೆಲ್ಲಗೆ ನೀ ಕಣ್ಮುಚ್ಚಲು😜
ನವಿರಾದ ಹಣೆಗೆ ಮುತ್ತಿಕ್ಕಲು
ಅಖಿಲ ಬ್ರಹ್ಮಾಂಡ ಸೂರೆಗೊಂಡಿದೆ ಚಿನ್ನ ಆ ನಿನ್ನ
ಚೆಲುವು...!
ಕಾಳಿದಾಸನ ಕಾವ್ಯದ ಕಾಮಧೇನು
ರವಿವರ್ಮನ ಕುಂಚದ ಬಣ್ಣ ನೀನು
ನಿನ್ನ ಸಿಹಿ ದ್ವನಿಗೆ ಮರಳಾದೆನು
ನನಗೆಂದೆ ಆ ಬ್ರಹ್ಮ ಸೃಷ್ಟಿಸಿದ ನಿನ್ನನು..!
ತಳುಕು ಬಳುಕಿನ ನಡೆ ನಿನ್ನ
ಕನ್ನ ಹಾಕಿದೆ ನಿನ್ನ ಚೆಲುವಿಗೆ ಮನ
ಮೋಹ ಕವಿದಿದೆ ಮನಸು ಕಾದಿದೆ
ಮುದದಿ ಅಪ್ಪಿಕೊಳ್ಳುವೆ ನಿನ್ನ ‌ಮುಗುದೆ..,!
ನೂರು ಜನ್ಮವೆತ್ತರೂ ನನ್ನವಳಾಗು..
ನನ್ನ ಪುಟ್ಟ ಹೃದಯದ ಗೂಡಿಗೆ ರಾಣಿಯಾಗು..
ಪ್ರೇಮ ಕಾವ್ಯಕ್ಕೆ ದ್ವನಿಯಾಗು..
ಮುಸ್ಸಂಜೆ ವೇಳೆಗೆ ಬೆಳಕಾಗು..!

Image may contain: 1 person, smiling


ಪಟ್ಟಾಭಿಷೇಕದ ಸುವರ್ಣ ಕಾಲವನ್ನು ಆಚರಿಸುತ್ತಿರುವ ಪೂಜ್ಯ ಖಾವಂದರಿಗೆ ಕವಿತೆಯ ನಮನ ..!
ಸಜ್ಜನಿಕೆಯ ಸಾಕಾರ ಮೂರ್ತಿ
ಬಡವರ ಪಾಲಿನ ಭಾಗ್ಯ ಜ್ಯೋತಿ
ನೊಂದವರ ಬಾಳಿಗೆ ಚಿಲುಮೆಯ ಸ್ಪೂರ್ತಿ
ವಿಶ್ವದೆಲ್ಲೆಡೆ ಹಬ್ಬಿದೆ ಈ ಮಹಾತ್ಮನ ಕೀರ್ತಿ
ದಾನ ಧರ್ಮ ನಡೆಯುವ ಕ್ಷೇತ್ರದಲಿ
ಮಂಜುನಾಥ ಸ್ವಾಮಿ ನೆಲೆಸಿರುವ ಧರ್ಮಸ್ಥಳದಲಿ
ಅಣ್ಣಪ್ಪನ ಮಹಿಮೆಯಿರುವ ಪುಣ್ಯ ಸನ್ನಿಧಿಯಲಿ ನಡೆಯುತಿದ್ದಾರೆ ಈ ಮಹಾತ್ಮ ನ್ಯಾಯ ನಿಷ್ಠೆಯಲಿ
ಈ ಮಹಾತ್ಮನಿಂದ ಬೆಳಗಿದ ಬೆಳಗಿದ ಜೀವಗಳೆಷ್ಟೋ
ಸಾಗಿಸುತಿವೆ ತಮ್ಮ ಸಂಸಾರ ರಥ ಇಷ್ಟಪಟ್ಟು ಇವರ ಕೃಪೆಯಿಂದ ಗ್ರಾಮ ಗ್ರಾಮಗಳಲಿ ರಚಿಸೆದೆವು ಪ್ರಗತಿಬಂಧು
ಇದರಿಂದ ಈ ಮಹಾತ್ಮನಾಗಿದ್ದಾನೆ ಬಡವರ ಬಂಧು
ಇವರ ಕಣ್ಣುಗಳಲಿ ಹೊಳೆಯುತಿದೆ ಕರುಣೆಯ ಸೆಳೆತ
ಇದನ್ನು ನೋಡಲು ಸಾವಿರಾರು ಜನರ ತುಡಿತ
ಬಂದವರನ್ನು ಪ್ರೀತಿಯಿಂದ ಸ್ವಾಗತಿಸುತ್ತ
ಪರಿಹರಿಸುತ್ತಾರೆ ಅವರ ನೋವ ಆಲಿಸುತ್ತ
ಇವರಿಂದ ಅದೆಷ್ಟೋ ಜೀವಗಳು ಪಡೆದಿವೆ ಸಾಕ್ಷಾತ್ಕಾರ
ಇದರಿಂದ ಈ ಮಹಾತ್ಮ ಜನರ ಸನ್ನಡತೆಯ ನೇತಾರ
ಒಲಿದು ಬಂದಿದೆ ಇವರಿಗೆ ಹಲವು ಪುರಾಸ್ಕಾರ
ಆಶಿಸುವೆವು ಸಾಗಲಿ ಇವರ ಪ್ರಯಾಣ ಸುಖಕರ ..!
ರಾಜೇಶ್
ಹುಡುಕಬೇಕಿದೆ ಸ್ವಚ್ಚಂದ ಸ್ಥಳವೊಂದ
ಶಾಂತಿಯುತ ಪರಿಸರವೊಂದ
ಅರಸಬೇಕಿದೆ ಸುಂದರ ಪ್ರಪಂಚವೊಂದ
ನಿರ್ಬೀತಿಯಿಂದ ಬದುಕಬಲ್ಲ ಸಮಾಜವೊಂದ
ಹುಡುಕಬೇಕಿದೆ ಕಪಟವರಿಯದ ಸ್ನೇಹವೊಂದ
ವಂಚನೆಯಿರದ ಸಂಬಂಧವೊಂದ
ಬೇಕಾಗಿದೆ ಮೋಸವಿರದ ಪ್ರೀತಿಯೊಂದ
ಪರರ ಕಲ್ಯಾಣ ಬಯಸುವ ಬಾಳೊಂದ
ಬೇಕಾಗಿದೆ ನಾನು ನೀನು ಪದಗಳಿರದ ಶಬ್ದ ಕೋಶವೊಂದು
ಹೊಲಸು ರಾಜಕೀಯವಿರದ ಸಮಾಜವೊಂದು
ಹುಡುಕಬೇಕಿದೆ ದ್ವೇಷ ಕಾರದ ಧರ್ಮವೊಂದು
ಸರ್ವರ ಪ್ರೀತಿಸುವ ಗುರುವೊಂದ
ಹೇಗೆ ಹುಡುಕಲಿ‌ ನಾ ಅವೆಲ್ಲವನ್ನೂ..?
ನಂಬಿಕೆಯೆಂಬುದು ನನ್ನಲ್ಲೇ ಸುಟ್ಟು ಬೂದಿಯಾಗಿರುವಾಗ
ಕಪಟವು ನನ್ನೆದೆಯಲ್ಲಿ ಮೃದಂಗ ಬಾರಿಸುತಿರುವಾಗ
ಸತ್ಯ ಸತ್ತು ಸಮಾಧಿಯಾಗಿರುವಾಗ
ಹೇಗೆ ಹುಡುಕಲಿ‌ ನಾ ಅವೆಲ್ಲವನ್ನೂ...?
ನಾನು ನಾನೆಂಬ ಅಹಂ ತಲೆಯೇರಿ ಕಿರೀಟವಾಗಿರುವಾಗ
ಹೆಣ್ಣು, ಹೊನ್ನು ಮಣ್ಣಿನ ಮೋಹಕೆ ಮನ ಮರುಳಾಗಿರುವಾಗ..
ನೀನು ನೀನೆಂದು ಪರಕೀಯನ ಅವಮಾನಿಸುತಿರುವಾಗ
ಎಲ್ಲಿ ಹುಡುಕಲಿ ನಾ ಅವೆಲ್ಲವನ್ನೂ...?
ವಿಕೃತ ಮನಸ್ಸು ಮದಿರೆಯ ಬಯಸುವಾಗ
ಅಧಿಕಾರದ ಅಮಲು ತಲೆಗೇರಿದಾಗ
ದೇವ ದಿಂಡರ ಹೆಸರಿನಲಿ ಕೈ ಗೆ ರಕ್ತ ಮೆತ್ತಿಸಿಕೊಂಡಾಗ...!
ಯಾರ ಕೇಳಲಿ ನಾ‌‌ ಅವೆಲ್ಲವನ್ನೂ...?
ಸಂಬಂಧಗಳ ಹೊಸಕಿ‌‌ ಹಾಕಿದಾಗ
ಮಾಯಂಗನೆಯ ಮಾತಿಗೆ ಮನ ಮರುಳಾದಾಗ
ಎಲ್ಲಾ ಇದ್ದು ಇಲ್ಲ ಎಂಬ ಭ್ರಮೆ ಆವರಿಸಿದಾಗ...!
ಸಾದ್ಯವಾಗದು ಅವೆಲ್ಲವ ಹುಡುಕಲು
ಮುದ್ದೆ ಮಾಂಸ, ಮೂಳೆಗಳಿರುವ ಈ ದೇಹಕ್ಕೆ
ಅರಿವಿಲ್ಲದೆ ಅಲೆದಾಡುವ ಎನ್ನ‌ ಬಿಕನಾಶಿ ಆತ್ಮಕ್ಕೆ
ನಾನು ನೀನೆಂಬ ಬಂಧಗಳ ಮುಕ್ತಿಯೊಂದೇ
ನಾ ಬಯಸಿದ್ದೆಲ್ಲ ಹುಡುಕೋಕೆ...!
ರಾಜೇಶ್
ಅಂದು ಜೋಸೆಫನು ಜತೆಗಿದ್ದ
ಕುಚುಕು ಕರೀಮನು ಕಣ್ಣುಗಳಾಗಿದ್ದ
ಹರಿಜನರ ಹರೀಶನು ಉಸಿರಾಗಿದ್ದ
ಭಟ್ಟರ ಮಗನೂ ನಮ್ಮೊಂದಿಗೆ ಬೆರೆತಿದ್ದ
ನಾವು ಏರದ ಮರಗಳಿಲ್ಲ
ಆಡದ ಆಟಗಳಿಲ್ಲ
ಮಾವು ಕದ್ದು ತಿನ್ನಲು ನುಗ್ಗದ ತೋಟಗಳಿಲ್ಲ
ಶಾಲೆಯಲ್ಲಿ ಶಿಕ್ಷೆ ಅನುಭವಿಸಿದ ದಿನಗಳೇ ಇಲ್ಲ..!
ಕರೀಮನ ಮನೆಯ ಬಿರಿಯಾನಿ ಸವಿಯದ ದಿನವಿಲ್ಲ
ಜೋಸೆಫನ ಹಬ್ಬಕ್ಕೆ ಹಾಜರು ನಾವೆಲ್ಲ
ಭಟ್ಟರ ಮನೆಯ ಪಾನಕ ಸವಿ ಬೆಲ್ಲ
ಇರುತಿದ್ದೆವು ಹರೀಶನ ಮನೆಯಲ್ಲಿ ಕರೆದಾಗಲೆಲ್ಲ
ಅಂದು ನಮ್ಮ ಎಳೆಯ ವಯಸ್ಸು
ಪರಿಶುದ್ದವಾಗಿತ್ತು ಎಲ್ಲರ ಮನಸ್ಸು
ಕಾಣುತಿದ್ದೆವು ಹಲವು ಕನಸು
ಒಟ್ಟಾಗಿ ಸಾಧಿಸಲು ಯಶಸ್ಸು..!
ಕಾಲ ಕಳೆದು ಹೋಯಿತು
ಸಮಾಜದ ಹಲವು ಮುಖಗಳ ಪರಿಚಯವಾಯಿತು
ಪಕ್ಷ ಪಂಥಗಳು ಬೇರೂರಿತು
ಲಗಾಮಿಲ್ಲದ ಕುದುರೆಯಂತೆ ಮನಸ್ಸು ಅಲೆದಾಡಿತು
ಧರ್ಮದ ಅಮಲು ತಲೆಗೇರಿತು
ಗಾಳಿ ಸುದ್ದಿಗಳು ಕಿವಿಗಪ್ಪಳಿಸಿತು
ದ್ವೇಷದ ಗಾಳಿ ಮನವ ಆವರಿಸಿತು
ಜಾತಿ ಧರ್ಮದ ಮುಂದೆ ಪ್ರೀತಿ ಸೋತಿತು
ತಲೆಯ ಮೇಲಿನ ಟೋಪಿ
ಹಣೆಯ ವಿಭೂತಿ
ಸ್ನೇಹಕ್ಕೆ ತಂದಿಟ್ಟಿತು ಅಧೋಗತಿ..!
ಬಿಸಿ ರಕ್ತದ ಅಮಲಿನಲ್ಲಿ
ಹಲವರು ಸೇರಿ ನಿರ್ಮಿಸಿದ ಕಂದಕದಲ್ಲಿ
ಕೇವಲವಾಯಿತು ನಮ್ಮ ಸ್ನೇಹ ಕೆಲವೇ ದಿನಗಳಲ್ಲಿ
ಪ್ರೀತಿ ಕಂಗಳು ಕುರುಡಾಗಿತ್ತು ದ್ವೇಷದಲ್ಲಿ
ಬದುಕಿನ ಇಳಿ ಸಂಜೆ ಎದುರಾಯಿತು
ದೇಹದ ಶಕ್ತಿ ನಶಿಸಿತ್ತು
ಧರ್ಮದ ಅಮಲು ಇಳಿದಿತ್ತು
ಭುವಿಗೆ ಬೀಳ್ಗೊಡಲು ಕರೆ ಬಂದಿತ್ತು
ಆರು ಅಡಿ ಗುಂಡಿ ತಯಾರಾಗಿತ್ತು
ಹಿಂದಿರುಗಿ ನೋಡಿದೆ ನಾ ಬಂದ ದಾರಿ ಹೇಗಿತ್ತು..
ನನ್ನ ತಲೆಮಾರಿಗೆ ನಾ ನೀಡಿದ ಬಳುವಳಿ ಏನಿತ್ತು ..?
ದ್ವೇಷವೊಂದೆ ಅಲ್ಲಿ ಹೆಡೆ ಎತ್ತಿ ನಿಂತಿತ್ತು...!
 ರಾಜೇಶ್

Image may contain: 2 people, drawing



ಅವರೇಕೆ ಆರಿಸಿದರು ಬಶೀರ ನಮ್ಮ ಮನೆಯ ಬೆಳಕನ್ನ
ಇರಿದು ಕೊಂದರೇಕೆ ನಡು‌ ಬೀದಿಯಲಿ ನಮ್ಮನ್ನ
ಏನಿದೆ ನಮ್ಮಲ್ಲಿ ಅವರ ಕ್ರೂರತನಕ್ಕೆ ಕಾರಣ
ಧರ್ಮ ಕೇಳಿತೆ ನಮ್ಮ ಅವಸಾನ..?
ನೋಡಲ್ಲಿ ನನ್ನ ಹೆತ್ತಬ್ಬೆ ರೋಧಿಸುತಿಹಳು
ನಿನ್ನಾಕೆ ನಿನ್ನ ದಾರಿಗೆ ಪರಿತಪಿಸುತಿಹಳು
ಕೇಳುತಿದೆಯೇ ನಿನಗೆ ನನ್ನ ಸಹೋದರನ ಮೂಕ ರೋಧನೆ
ಕಾಣುತಿದೆಯೇ ನಿನ್ನ ಮಕ್ಕಳ ವೇದನೆ
ಅಗೋ ನೋಡಲ್ಲಿ ಸಂಘಟನೆಗಳು ಬೀದಿಗಿಳಿದಿವೆ
ಗೋಸುಂಬೆಗಳ ಬಾಯಿಯಿಂದ ಪುಂಖಾನುಪುಂಗ ಭಾಷಣ ಉದುರುತಿದೆ
ಸುದ್ದಿ ವ್ಯಭಿಚಾರಿಗಳು ಬಣ್ಣ ಹಚ್ಚುತಿವೆ
ಶಾಂತಿ ನೆಪದಲ್ಲಿ ಬೇಳೆ ಬೇಯಿಸುತಿವೆ
ಅಲ್ಲಾಹು ಬಯಸಿದನೇ ಎನ್ನ ಸಾವನ್ನು
ಶ್ರೀ ರಾಮ ಕೇಳಿದನೇ ನಿನ್ನ ಉಸಿರನ್ನು
ಅವರೇಕೆ ಬಯಸಿದರು ನಮ್ಮ ರಕ್ತವನ್ನು
ಯಾರಿಗೆ ಬಯಸಿದೆವು ನಾವು ಕೆಡುಕನ್ನು
ಧರ್ಮ ಉಳಿಸಲು ನನ್ನ ಹತ್ಯೆಯಂತೆ
ನಿನ್ನ ಸಾವು ನನ್ನ ಬಲಿದಾನಕ್ಕೆ ಪ್ರತಿಕಾರವಂತೆ
ಕಂಡಿಲ್ಲವೇನೋ ಅವರು ರಕ್ತದ ಬಣ್ಣ
ಇಲ್ಲವಾದರೆ ತರೆಯುತಿದ್ದರು ಪಾಪಿಗಳು ಅವರ ಕಣ್ಣ.
ಎಲ್ಲಾ ಅಳಿದ ಮೇಲೆ ನಾವೀಗ ಹುತಾತ್ಮರು
ರಾಜಕೀಯದ ಅಮಲಿನಲಿ ಬೊಬ್ಬಿಡುತಿರುವರು ಹುಂಬರು
ನನ್ನ ಸಾವು ಕೆಸರಿನೆಡೆಯಿಂದ ಕಮಲವರಳಿಸುತಿದೆ
ನಿನ್ನ ಹತ್ಯೆ ಸೊಟ್ಟಗಿದ್ದ ಕೈ ಯನ್ನು ನೆಟ್ಟಗಾಗಿಸುತಿದೆ
ರಾಜೇಶ್
Image may contain: text


ಟೋಪಿದಾರಿಯೊಬ್ಬರಲ್ಲಿ ಕೇಳಿದೆ ದೇವರೆಲ್ಲಿದ್ದಾನೆ...?
ಮಸಿದಿಯ ಗೋರಿಯೆಡೆಗೆ ಕೈ ತೋರಿದರು...!
ವಿಭೂತಿ ಬಳಿದವರಲ್ಲಿ ಕೇಳಿದೆ ದೇವರೆಲ್ಲಿದ್ದಾನೆ..?
ಮಂದಿರದ ಗೋಪುರದೆಡೆಗೆ ಕರ ಮುಗಿದರು...!
ಬಿಳಿ ವಸ್ತ್ರದಾರಿಯೊಬ್ಬರ ಬಳಿ ಕೇಳಿದೆ ದೇವರೆಲ್ಲಿದ್ದಾನೆ..?
ಚರ್ಚಿನ ಕಮಾನಿನತ್ತ ನೋಟವಿತ್ತರು..!
ಅರಿವಿರದೆ ನಡೆದೆ ಅದರೆಡೆಗೆ
ಹುಡುಕಿದೆ ಮೂಲೆ ಮೂಲೆಗೆ
ಕಣ್ಣಿಗೆ ಕಾಣದ ದೇವನೆಡೆಗೆ..!
ಸರ್ವಶಕ್ತ ನಾಮದೆಡೆಗೆ..!
ಆದರೆ ಅವನೆಲ್ಲೂ ಕಾಣಲಿಲ್ಲ ಅಲ್ಲೆಲ್ಲೂ ನನಗೆ..!
ದೇವನ ಹುಡುಕಿ ಬಹುದೂರ ಅಳೆದೆ..!
ಅವನನೆಲ್ಲೂ ಕಾಣದೆ ಬಳಲಿ ಬೆಂಡಾದೆ..!
ಕಣ್ಣು ಹಾಯಿಸಿದೆ ಮೆರವಣಿಗೆಯಲಿ ಸಾಗುತಿದ್ದ ಗುಂಪಿನೆಡೆಗೆ..!
ಸಾಗುತಿದ್ದರೂ ಅವರು ದೇವನೆಡೆಗೆ..!
ಅಲ್ಲಾ.. ಶ್ರೀ ರಾಮ ನಾಮದೆಡೆಗೆ..!
ದೇವನೆಲ್ಲಿ ಕಾಣದೆ ತಲೆ ಕೆರೆದು ಸುಮ್ಮನೆ ಕುಳಿತಿರಲು.
ಎಂದೂ ಕಾಣದ ದೇವನನು ಕಂಡೆ
ದುಡಿದು ಬಂದ ಅಪ್ಪನ ಬೆವರ ಹನಿಗಳಲಿ
ತೆಲೆ ಸವರಿ ಮುದ್ದಾಡಿದ ತಾಯಿಯ ಮಮತೆಯಲಿ
ಮುದ್ದು ಮಡದಿಯ ಮೊಗದಲಿ
ಮಕ್ಕಳ ತುಂಟಾಟದ ನಗುವಿನಲಿ..!
ಮರೆತಿದ್ದೆ ನಾನು ನನ್ನ ಮನೆಯಲ್ಲೇ ದೇವನಿರುವನೆಂದು
ಅರಿಯದೆ ಹೋದೆ ನನ್ನಲ್ಲೇ ದೇವರೊಬ್ಬ ಅಡಗಿರುವನೆಂದು.!
ತಿಳಿಯದೆ ಹೋದೆ ನಾನು ಕಪಟವರಿಯದ ಪ್ರೇಮವೇ ದೇವರೆಂದು..!
ನನ್ನ ಅಂತರಾಳದಲ್ಲಿ ಅದು ಅಡಗಿದೆಯೆಂದು..!
ರಾಜೇಶ್

No automatic alt text available.


ಕಾಮರ್ಸ್ ಕವಿತೆ
ಜೀವನ ತಾಳೆಯಾಗದ ಬ್ಯಾಳೆನ್ಸ್ ಶೀಟುಗಳು
ತಲೆ ಕೆರದಷ್ಟು ಮುಗಿಯದ ಟ್ರಾನ್ಸಕ್ಷನ್ಗಳು
ಮಾಡಿದ ಪಾಪ ಪುಣ್ಯಗಳು
ಎಡ ಬಲದ ಡೆಬಿಟ್ ಕ್ರೆಡಿಟ್ಗಳು
ಅರಿವಿಲ್ಲದೆ ಆಗುವ ಖರ್ಚು ವೆಚ್ಚಗಳು
ತಾಳೆ ಹಾಕಲು ಮತ್ತಷ್ಟು ರಿವರ್ಸ್ ಎಂಟ್ರಿಗಳು
ಬಾಸ್ ಗೆ ಬಕೆಟ್ ಹಿಡಿದರೆ ಅಪ್ರಿಸಿಯೇಷನು
ಎದುರಾಡಿ ಗೆದ್ದೆಯಾದರೆ ಕಾದಿದೆ ನಿನಗೆ ಡಿಪ್ರಿಸಿಯೇಷನು
ಹೇಳದೆ ಕೇಳದೆ ಬಂದು ಹೋಗುವ ಪ್ರೀತಿ ಪ್ರೇಮಗಳು
ಅವೆಲ್ಲವೂ ಜೀವನದ ಬ್ಯಾಡ್ ಡೆಬ್ಟ್ ಗಳು
ಗೆಳೆಯರೊಂದಿಗೆ ಮಾಡಿದ ಮಿಲಿಟರಿ ಪಾರ್ಟಿಗಳು
ಅವೆಲ್ಲವೂ ಅನ್ ಸೆಕ್ಯುರ್ಡ್ ಲೋನ್ ಗಳು
ದಿನ ನಿತ್ಯ ಬರುವ ಹೊಸ ಸವಾಲುಗಳು
ತಲೆ ಬುಡವಿಲ್ಲದ ಸರಕಾರದ ಟ್ಯಾಕ್ಸ್ ಸೆಸ್ಸುಗಳು
ಎದುರಿಸಲೇ ಬೇಕು ಬಿಡು
ಇಲ್ಲವಾದರೆ ತಪ್ಪಿದ್ದಲ್ಲ ಐಟಿ ರೇಡು
ಆಗೋಮ್ಮೆ ಈಗೊಮ್ಮೆ ಬಂದು ಹೋಗುವ ರಿಲೇಶನ್ಸ್
ಕೂಡಿ ಕಳೆದರೂ ಟ್ಯಾಲಿಯಾಗದ ಬ್ಯಾಂಕ್ ರಿಕನ್ಸಿಲೇಶನ್ಸ್
ಕಷ್ಟದಲ್ಲಿ ಕೈ ಹಿಡಿವ ಪ್ರೆಂಢ್ಸು
ಅವರೆ ನಿನ್ನ ಪಾಲಿಗೆ ಅಡ್ವಾನ್ಸು
ಸಮಾಜದಲ್ಲಿ ಗಳಿಸಿದ ಪ್ರೀತಿ ವಿಶ್ವಾಸಗಳು
ಅವೆಲ್ಲವೂ ಇಂಟ್ಯಾಂಜಿಬಲ್ ಅಸೆಟುಗಳು
ಕಣ್ಣಿಗೆ ಕಾಣದವುಗಳು
ಬಲಗೊಳಿಸುವವು ನಿನ್ನ ಕೈಗಳು
ಕೂಡಿ ಕಳೆದರೂ ಎಡ ಬಲಕ್ಕೆ ತಾಳೆಯಿಲ್ಲ
ಲೆಕ್ಕದಲ್ಲೆ ಕಳೆದು ಹೋಗುತಿದೆ ಜೀವನವೆಲ್ಲ
ಗಳಿಕೆಯೆಂಬ‌‌ ಅಸೆಟ್ಟು ತುಂಬಿದಾಗಳೆಲ್ಲ
ನೆಮ್ಮದಿಯೆಂಬ ಲಾಯಬಿಲಿಟಿ ತಾಳೆಯಾಗುತಿಲ್ಲ
ರಾಜೇಶ್
ಮಾರಿ ಕೊಳ್ಳದಿರಿ ನಿಮ್ಮ ಓಟು
ಸಿಗುವುದೆಂದು ಗರಿ ಗರಿ ನೋಟು
ಕಟ್ಟಿ ಕೊಳ್ಳದಿರಿ ನಿಮ್ಮ ಹಕ್ಕಿಗೆ ರೇಟು
ಭ್ರಷ್ಟರ ಕೈ ಗೆ ನೀಡದಿರಿ ನಿಮ್ಮ ಜುಟ್ಟು..!
ಬಣ್ಣ ಚಿಹ್ನೆಗೆ ಮಾರು ಹೋಗದಿರಿ
ಅಲ್ಪಾವಧಿಯ ಮಿಕ್ಸಿ ಕುಕ್ಕರ್ ಶಬ್ದಕ್ಕೆ ತಾಳ ಹಾಕದಿರಿ
ಮತ ಪಂತಗಳು ನಿಮ್ಮ ಮನದಲ್ಲಿರಲಿ
ನಿಮ್ಮ ಹಕ್ಕು ಸ್ವಚ್ಛ ಆಡಳಿತಕ್ಕೆ ಪೂರಕವಾಗಿರಲಿ..!
ದುರಾಡಳಿತದ ನೆನಪು ಮಾಸದಿರಲಿ
ಕೋಟಿ ಕೋಟಿ ಕದ್ದ ಖದೀಮರ ಮೊಗವ ಮತ್ತೆ ನೋಡದಿರಿ
ಅನ್ಯಾಯವಾಗಿ ಮಡಿದ ಜೀವಗಳಿಗೆ ಬೆಲೆಯಿರಲಿ
ನಿಮ್ಮ ಹಕ್ಕು ಆ ಆತ್ಮಗಳಿಗೆ ನ್ಯಾಯ ಒದಗಿಸಲಿ..!
ನಿಮ್ಮ ಮತಗಳು ನಿಮ್ಮ ಮನೆ ಮಗಳು
ಮಗಳಿಗೆ ರಕ್ಷೆ ನೀಡದವರಿಗೆ ಬೀಳದಿರಲಿ ನಿಮ್ಮ ಮತಗಳು
ನಿಮ್ಮ ಮತ ನಿಮ್ಮ ಹಕ್ಕು
ಸದ್ದಡಗಲಿ ಅಧಿಕಾರದ ಮದವೇರಿದವರ ಸೊಕ್ಕು...!
ಕೈ ಕಮಲ ತೆನೆ..
ನಮಗೆ ಬೇಕಿರುವುದು ಬದಲಾವಣೆ
ಭ್ರಷ್ಟ ಆಡಳಿತಕ್ಕೊಂದು‌ ಕೊನೆ
ಹಕ್ಕು ಚಲಾಯಿಸಿ ಕೊನೆಗಾಣಿಸುವುದು ನಮ್ಮ ಹೊಣೆ...!
ರಾಜೇಶ್
Image may contain: 2 people, people smiling

ಅಂದು ನಾ ಅತ್ತಾಗ
ಜೋಗುಳ ಹಾಡಿದಳಾಕೆ ಮೆತ್ತಗೆ
ಆಗಸದಿ ಚಂದ ಮಾಮನ ಕರೆಯುತ್ತಾ
ತುತ್ತು ತಿನ್ನಿಸಿದಳು ಮೆತ್ತಗೆ
ನನ್ನ ಆಟ ತುಂಟಾಟ
ಸಹಿಸಿಕೊಂಡಳಾಕೆ ನನ್ನ ರಂಪಾಟ
ಮುನಿಸು ಕಂಡಿಲ್ಲ ಕನಸುಗಳೇ ಎಲ್ಲಾ
ಕನಸು ಮನಸಿನಲಿ ಆಕೆಗೆ ನಾನೇ ಎಲ್ಲಾ
ಬೆಳೆಸಿ ಬಿಟ್ಟಳೆನ್ನ ಬಹು ಎತ್ತರಕ್ಕೆ
ಅವಳ ಸಂತೋಷ ಪಸರಿಸಿತು ಆಗಸಕೆ
ಸರ್ವ ತ್ಯಾಗಿ ಅವಳು ನನ್ನ ಸಂತೋಷಕೆ
ಸ್ವರ್ಣ ಮುಕುಟ ಅವಳು ತಾಯಿ ಪದದ ಹಿರಿಮೆಗೆ
ಅಮ್ಮ ಈ ಜಗತ್ತಲ್ಲೇ ಶ್ರೇಷ್ಠ ಕಾಣಿಕೆ
ಕಪಟವೇನೆಂದು ಅರಿಯದು ಆ ಹೃದಯಕ್ಕೆ
ಕರುಣೆ ತಾಳ್ಮೆಯ ಮೂರ್ತಿ ಆಕೆ
ನೆರಳಾಕೆ, ಉಸಿರಾಕೆ ಇನ್ನೊಂದು ಜೀವಕೆ
ಪದಗಳು ಸಾಲದು ಆಕೆಯ ವರ್ಣಿಸಲು
ಕೋಟಿ ದೇವರಿಗಿಂತ ಆಕೆ ಮಿಗಿಲು
ಎಂದೂ ದಣಿಯದೆ ನೆರಳು ನೀಡುವಳು
ಸಂಸಾರ ರಥದ ಸಾರಥಿ ಅವಳು
ರಾಜೇಶ್

Image may contain: bird



ಜೋಡಿ ಗಿಣಿಗಳು ಮನೆಯ ಮಾಡಿವೆ
ರಂಗು ರಂಗಿನ ಪ್ರೀತಿಯಿಂದ ಬಣ್ಣ ಹಚ್ಚಿವೆ
ನೀಲ ಅಂಬರದಿ ಹಾರ ಹೊರಟಿವೆ
ಜೊತೆಯಾಗಿ ಕುಣಿದು ಕೇಕೆ ಹಾಕಿವೆ...!
ನಿನ್ನೆಯ ಹಂಗು ಅವರಿಗಿಲ್ಲ
ನಾಳೆಯ ಕೊರಗು ಮನದಲಿಲ್ಲ
ಕಪಟವೇನೆಂದು ಅವಕ್ಕೆ ತಿಳಿದಿಲ್ಲ...!
ಹೃದಯ ಸಂಪತ್ತು ಹರಡಿವೆ ಜಗದಲ್ಲೆಲ್ಲ...!
ಸಮಾಜದ ಕಟ್ಟು ಕಟ್ಟಳೆಗಳ ಪರಿವೆಯಿಲ್ಲ
ಜಾತಿ ಧರ್ಮದ ಪರಿಧಿ ಅವರಲ್ಲಿಲ್ಲ...!
ಆಸ್ತಿ ಅಂತಸ್ತು ಅವರು ಹೋದಲೆಲ್ಲ
ಜೊತೆಯಾಗಿ ಸಾಗುವ ದಾರಿಗೆ ಗುರಿಯಿಲ್ಲ...!
ತುತ್ತು ಕಾಳಲ್ಲೂ ಸಮಪಾಲು
ನಾನು ನೀನೆಂದು ಅವರಲ್ಲಿ ಇಲ್ಲ ಗೋಳು...!
ಜಗತ್ತಿನ ಪ್ರೇಮ ರಾಯಭಾರಿಗಳು....!
ಹಸಿರು ಜೋಡಿ ಗಿಣಿಗಳು...!😍
ರಾಜೇಶ್
ಮತ್ತೆ ಹಂಚಿಕೊಳ್ಳಬೇಕೆನಿಸಿತು ಈ ಕವಿತೆಯ ಸಾಲುಗಳನ್ನು...! ಅತಿವೃಷ್ಟಿಯಿಂದ ಕೇರಳದಲ್ಲಿ ಉಂಟಾದ ಸಾವು ನೋವಿಗೆ ಸಂತಾಪವಿದೆ...!
(ಕೇರಳದಲ್ಲಿ ನಡು ಬೀದಿಯಲ್ಲಿ ಕರುವನ್ನು ಕಡಿದು ವಿಕೃತಿ ಮೆರೆದಾಗ ಬರೆದ ಕವಿತೆ)

ಕಡಿದು ಕೊಂದರೆನ್ನ ನಡು ಬೀದಿಯಲ್ಲಿ
ತಲೆಗೇರಿದ ರಾಜಕೀಯದ ಅಮಲಿನಲ್ಲಿ
ಉಳಿವಿಲ್ಲವೇ ನನಗೆ ಈ ಪುಣ್ಯ ಭೂಮಿಯಲ್ಲಿ ..?
ನನ್ನ ಮೂಕ ರೋಧನೆ ಆಲಿಸುವರಾರಿಲ್ಲಿ ..?
ಎಡ ಬಲ ಪಂಥಗಳ ಅರಿವಿಲ್ಲ ಎನಗೆ
ನನ್ನಲ್ಲಿರುವ ಎಲ್ಲವ ನೀಡಿದೆ ನಿನಗೆ
ಎಳೆದು ಕಟ್ಟದಿರಿ ನನ್ನ ಒಂದು ಧರ್ಮದ ಬುಡಕ್ಕೆ
ನಿಮ್ಮ ಸ್ವಾರ್ಥಕ್ಕೆ ಸಾಧಿಸದಿರಿ ನನ್ನ ಮೇಲೆ ಹಗೆ
ನಿಮ್ಮ ಹಿರಿಯರು ಪೂಜಿಸಿದರು ಎನ್ನ
ಪೂಜಿಸೆಂದು ನಾ ಕೇಳಿಲ್ಲ ಅವರನ್ನ
ಮೊಲೆ ಹಾಲು ಕೊಟ್ಟು ಪೋಷಿಸಿದೆ ನಿನ್ನ ಮಗುವನ್ನ
ಆದರೆ ಇಂದು ನಡು ಬೀದಿಯಲ್ಲಿ ಕತ್ತರಿಸಿದೆ ನನ್ನ ಕರುಳನ್ನ
ನನ್ನಲ್ಲಿರುವ ಎಲ್ಲವ ನಿನಗೆ ನೀಡಿದೆ
ಕಡೆಗೆ ನಾನದೆನೆ ನಿನಗೆ ಮಾಂಸದ ಮುದ್ದೆ ...?
ನಿನ್ನ ಹೆತ್ತಬ್ಬೆಯ ಎದೆ ಹಾಲುಂಡವನು ನೀನು
ನಾಳೆ ಅವಳನ್ನು ನನ್ನ ದಾರಿಗೆ ಅಟ್ಟುವೆಯೋ ಏನು ...!
ತಪ್ಪಿದ್ದಲ್ಲ ಎಲ್ಲರಿಗೂ ಸಾವು
ನೀನು ನೀಡಿದರೆ ನನ್ನ ವಂಶಕ್ಕೆ ನೋವು
ನೀಗಿತೆ ನಿನ್ನ ಕ್ರೌರ್ಯದ ಹಸಿವು..?
ಆದರೆ ನೆನಪಿಡು ಘನಘೋರವಾದೀತು ನಿನ್ನ ಸಾವು ..!
ರಾಜೇಶ್

Image may contain: food





ಕಟ್ಟಿದ ರಕ್ಷೆಯು ಬಂದನವಾಗದಿರಲಿ
ಬಾಂಧವ್ಯ ಬೆಸೆಯುವ ಬಂಧವಾಗಲಿ
ಗೌರವವಿರಲಿ ಪ್ರೀತಿಯಿರಲಿ
ಸಹೋದರತ್ವದ ಪ್ರೀತಿಯ ಸಾರವಿರಲಿ
ಹೆಣ್ಣೆಂದರೆ ಆಕೆ ಕೇವಲ ಹೆಣ್ಣಲ್ಲ
ಬೆಳಗುವುದು ದೀಪ ಸಹೋದರಿ ಇದ್ದಲ್ಲೆಲ್ಲ
ಮನೆ ಮನವ ಬೆಳಗುವಳು
ಭೂಮಿ ತೂಕದ ಸಹನೆಯುಳ್ಳವಳು
ಆಕೆ ದುರ್ಬಲೆಯಲ್ಲ
ಹಠ ದರ್ಪಕ್ಕೆ ಬಗ್ಗುವವಳಲ್ಲ
ಪ್ರೀತಿ ಮಮತೆ ತೋರಿದಾಗಲೆಲ್ಲ
ಮತ್ತೆ ಬೇಕೆಂದು ಬೇಡುವ ಭಿಕ್ಷುಕಿ ಅವಳು ...!
ಆಕೆ ಕಟ್ಟಿದ ರಕ್ಷೆಯು
ಕೊರಳ ಬಿಗಿವ ದಾರವಾಗದಿರಲಿ
ಪ್ರೀತಿಯ ಹೂಮಾಲೆಯಾಗಲಿ
ಸಹೋದರತ್ವದ ಬಂಧ ಚಿರಾಯುವಾಗಲಿ
ರಾಜೇಶ್
ಕ್ಷಮಿಸಿ ಬಿಡು ಗಾಂಧಿ ತಾತ

ಕ್ಷಮಿಸಿ ಬಿಡು ಗಾಂಧಿ ತಾತ ನಿನ್ನ ಹುಟ್ಟು ಹಬ್ಬಕ್ಕೆ ಶುಭಾಶಯ ಕೋರಲಾರೆ...!
ಹೇಗೆ ತಿಳಿಸಲಿ ನಾ..?
ಪ್ರತಿ ದಿನ ಎನ್ನ ದೇಶ ಕಾಯೋ ಯೋಧ ಕಾಶ್ಮೀರದಲ್ಲಿ ಪಾಪಿಗಳ ಗುಂಡಿಗೆ ಬಲಿಯಾಗುತಿರೆ..!
ಆ ಸಾವು ನೋವಿಗೆ ಪ್ರತ್ಯಕ್ಷವಾಗಿ ಅಲ್ಲದಿದ್ದರೂ ಪರೋಕ್ಷವಾಗಿ ಕಾರಣ ನೀನೆ ಅಲ್ಲವೇ ತಾತ...?
ನೀನೆನೋ ಪಕ್ಷ ಕಟ್ಟಿ ಹೆಸರಿಗೊಂದು ಸ್ವಾತಂತ್ರ್ಯ ಕೊಡಿಸಿದೆ..
ಆದರೆ ಆ ಪಕ್ಷವನ್ನು ವಿಸರ್ಜನೆ ಮಡುವ ಮೊದಲೇ ನೀ ಉಸಿರು ನಿಲ್ಲಿಸಿದಿಯಲ್ಲವೋ ತಾತ
ವಂಶವಾಹಿ ಆಡಳಿತಕ್ಕೆ ಕಾರಣ ನೀನಲ್ಲವೇ..?
ಹೇಳು ಹೇಗೆ ಮನಸಾದಿತು ನಿನಗೆ ಶುಭಾಶಯ ಸಲ್ಲಿಸಲು..?
ನಿನ್ನ ಹೆಸರೇ ಭ್ರಷ್ಟರಿಗೆ ರಾಜಕೀಯ ಸರಕು
ಹೆಸರಲ್ಲೊಂದು ಗಾಂಧಿ
ಇದ್ದರೆ ಸಾಕು ಅಶಕ್ತನಿಗೂ ಅಧಿಕಾರದ ಗಾದಿ
ನೀ ಹೋದ ಮೇಲೂ ನಿನ್ನ ಹೆಸರ ಮೇಲೆ ಹಗಲು ದರೋಡೆ
ಹೇಗೆ ತಿಳಿಸಲಿ ಗಾಂಧಿ ಹೆಸರಿಗೊಂದು ಶುಭಾಶಯ...?
ಮತ್ತೆ ಹುಟ್ಟಿ ಬಾ ಎಂದು ನಿನ್ನ ಕೇಳಲಾರೆ
ಹಾಗಂತ ನಿನ್ನ ನಿಸ್ವಾರ್ಥ ಸೇವೆ ಮರೆಯಲಾರೆ
ಮಾಲೆ ಹಾಕಿ ನಿನ್ನ ಪೂಜಿಸಲಾರೆ...!
ಕ್ಷಮಿಸಿ ಬಿಡು ಶುಭಾಶಯ ನಿನಗೆ ಕೋರಲಾರೆ...!