Friday, July 7, 2017

ಅವರ ಕಣ್ಣೀರಿನಲ್ಲಿ ಅನ್ನ ಬೇಯಿಸುವ ಕೆಲಸ ಮಾಡದಿರಿ.... !

ಕರಾವಳಿಯ ರಾಜಕಾರಣಿಗಳಿಗೆ ,
         ಇನ್ನೇನು ರಾಜ್ಯದ ವಿಧಾನ ಸಭಾ ಚುನಾವಣೆ ಹತ್ತಿರವಾಯಿತು , ಮತ್ತೆ ನಿಮ್ಮ ಸ್ಥಾನ ಗಟ್ಟಿಗೊಳಿಸಬೇಕು , ಜನರನ್ನು ಮರಳು ಮಾಡಬೇಕು , ಮತ ಯಾಚಿಸಬೇಕು . ಆಡಳಿತ ಪಕ್ಷದಲ್ಲಿದ್ದರೂ ಕಿತ್ತು ಗುಡ್ಡೆ ಹಾಕಿದ ಯಾವ ಸಾಧನೆಯೂ ಇಲ್ಲ. ವಿರೋಧ ಪಕ್ಷದಲ್ಲಿದ್ದು ಹೇಳಿ ಕೊಳ್ಳುವ ಘನ ಕಾರ್ಯ ಯಾವುದೂ ಇಲ್ಲ. ಲೋಕ ಸಭೆಯಲ್ಲಿ ಹೇಗೋ ಅವರಿವರ ಹೆಸರು ಹೇಳಿ ಅಧಿಕಾರ ಪಡೆದು ಕೊಂಡೆವು. ಆದರೆ ಈಗೇನು ಮಾಡುವುದು ...? ಎಂದು ಯೋಚಿಸಿದಾಗ ನಿಮ್ಮ ತಲೆಯಲ್ಲಿ ಬಂದದ್ದು ಮತ್ತೆ ಅದೇ ನಿಮ್ಮ ಹಿಂದಿನ ಚಾಳಿ,  ಹಿಂದೂ ಮುಸ್ಲಿಂ .... ! ಸಹೋದರರಂತೆ ಇದ್ದ ಹಿಂದೂ ಮುಸಲ್ಮಾನರ ನಡುವೆ ವಿಷ ಬೀಜ ಬಿತ್ತಿ ಅವರ ನಡುವೆ ನೆತ್ತರು ಹರಿಸಿ, ಆ ನೆತ್ತರ ನಡುವೆ ನಿಮ್ಮ ಬೆಳೆಯನ್ನು ಬೆಳೆಯುವ ಹುನ್ನಾರ . ಇಲ್ಲಿ ಹಿಂದೂ ಸತ್ತರೆ ಬಿ ಜೆ ಪಿ ಗೆ ಲಾಭ , ಮುಸಲ್ಮಾನ ಸತ್ತರೆ ಕಾಂಗ್ರೆಸ್ ಹಾಗೂ ಎಡ ಪಕ್ಷಗಳಿಗೆ ಲಾಭ. ಇದು ನಿಮ್ಮ ಚುನಾವಣಾ ರಣ ತಂತ್ರದ ಒಂದು ಭಾಗ. ಬಡವರ ಮನೆಯ ಮಗನ ಹೆಣದ ಮುಂದೆ ನಾಲ್ಕು ಹನಿ ಕಣ್ಣೀರು ಹರಿಸಿ, ಜೊತೆಗಿರುವ ಆವೇಶ ಭರಿತ ಯುವಕರೊಂದಿಗೆ ರಸ್ತೆ ತಡೆ ಮಾಡಿ, ಉರಿವ ಬೆಂಕಿಗೆ ತುಪ್ಪ ಸುರಿದು ಮತ್ತೊಂದು ಹೆಣ ಬೀಳೋವರೆಗೆ ನೀವು ವಿರಮಿಸಲಾರಿರಿ . ನಿಮಗೆ ಬೇಕಿರುವುದು ನಿಮ್ಮ ಕ್ಷೇತ್ರದ ಅಭಿವೃದ್ದಿಯಲ್ಲ , ಬದಲಾಗಿ ನಿಮ್ಮ ಪಕ್ಷದ ನಿಮ್ಮ ಬೆಂಬಲಿಗರ ಸಾವು , ಸಾವಿನ ಮನೆಯ ರಾಜಕೀಯ . ಒಬ್ಬ ಬೆಂಕಿ ಹಚ್ಚುವ ಮಾತು ಆಡಿದರೆ ಇನ್ನೊಬ್ಬ ಜೈಲಿಗಟ್ಟುವ ಮಾತು, ದ್ವೇಷ ತುಂಬಿದ ಜಾಗದಲ್ಲಿ ಶಾಂತಿಯ ಮಾತು ನಿಮ್ಮ ಬಾಯಿಯಿಂದ ಎಂದೂ ಬರಲಾರದು. ಅದು ನಿಮಗೆ ಬೇಕಾಗಿಯೂ ಇಲ್ಲ .
  ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ನಿಮ್ಮಂತಹ ಸೋಗಲಾಡಿ ರಾಜಕಾರಣಿಗಳನ್ನು ಆರಿಸಿದ ನಾವು ನಿಜವಾಗಿಯೂ ಮುಠಾಳರು .... ! ಬುದ್ದಿವಂತರೆದು ಅನಿಸಿಕೊಂಡವರು ನಾವೇನಾ ಎಂಬ ಅನುಮಾನಗಳು ನಮ್ಮಲ್ಲೇ ಕಾಡಲು ಶುರುವಾಗುತ್ತಿದೆ. ನಮ್ಮ ಜಿಲ್ಲೆಗೆ ಒಂದು ಒಳ್ಳೆಯ ಹೆಸರಿದೆ ಎಂದಾದರೆ ಖಂಡಿತ ಅದು ನಿಮ್ಮಿಂದ ಅಲ್ಲ . ಅದಕ್ಕಾಗಿ ನಿಮ್ಮ ತಾಕತ್ತನ್ನು ನೀವು ಎಲ್ಲಿಯೂ ತೋರಿಸಿಲ್ಲ. ನೀವು ತೋರಿಸಿರುವುದು ಕೇವಲ ಚುನಾವಣಾ ಸಂದರ್ಭದಲ್ಲಿ ಇಂತಹ ದೊಂಬಿ ಗಲಾಟೆಯಲ್ಲಿ ಬೆಂಕಿ ಹಚ್ಚುವಲ್ಲಿ ಮಾತ್ರ . ಜಿಲ್ಲೆಯ ಜೀವ ನಾಡಿ ನೇತ್ರಾವತಿ ತಿರುವು ಯೋಜನೆಯನ್ನು ಸರಕಾರ ಜಾರಿ ಮಾಡ ಹೊರಟಾಗ ಎಷ್ಟು ಜನ ಜನ ಪ್ರತಿನಿಧಿಗಳು ರಸ್ತೆಗಿಳಿದು ಹೋರಾಟ ಮಾಡಿದ್ದೀರಿ .. ? ಎಷ್ಟು ಜನ ಜನ ಪ್ರತಿನಿಧಿಗಳು ಪ್ರತಿಭಟನೆಯಲ್ಲಿ ಕರಾವಳಿಯ ಜನರಿಗೆ ಸಾಥ್ ನೀಡಿದ್ದೀರಿ ? ಅಧಿಕಾರದಲ್ಲಿದ್ದ ಮಂತ್ರಿ ಮಹೋದಯರು ನಿಮ್ಮ ಸರಕಾರದ ಯೋಜನೆ ಜಿಲ್ಲೆಯ ಪಾಲಿಗೆ ಮರಣ ಶಾಸನವಾಗುತ್ತಿದೆ ಎಂದು ಅರಿವಿದ್ದರೂ ಅದನ್ನು ಪ್ರತಿಭಟಿಸುವ ಗಂಡಸುತನ ತೋರಲಿಲ್ಲ ಯಾಕೆ .. ? ನಾನು ಹುಲಿ ವಂಶದವನು ಎಂದು ಬೊಬ್ಬಿರಿದವರು ಇಲಿಯಂತೆ ಬಿಲ ಸೇರಿದ್ದೇಕೆ .. ? ಇದಕ್ಕೆಲ್ಲ ನಿಮ್ಮ ಬಳಿ ಉತ್ತರವಿಲ್ಲ , ಕಾರಣ ನಿಮ್ಮ ರಾಜಕಾರಣ ನಿಂತಿರುವುದು ಜಿಲ್ಲೆಯ ಉಳಿವಿನಲ್ಲಿ ಅಲ್ಲ ... ! ಬದಲ್ಲಾಗಿ ಅದು ಕೋಮು ಸಂಘರ್ಷದ ಲಾಭದಲ್ಲಿ .
   ಒಂದು ಮಾತು ನೆನಪಿಡಿ ಇಂದು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಾವಿರಾರು ಯುವಕ ಯುವತಿಯರು ಹೊರ ರಾಜ್ಯ, ದೇಶಗಳಿಗೆ ಕೆಲಸಕ್ಕಾಗಿ  ಅಲೆದಾಡುತಿದ್ದಾರೆ , ಎಲ್ಲಾ ಸಂಪತ್ತು, ಸೌಕರ್ಯಗಳು ಇದ್ದರೂ ನಮ್ಮವರೇಕೆ ಹೊರ ಹೋಗಿ ಉದ್ಯೋಗವಾರಸುತಿದ್ದರೆ ... ? ನಮ್ಮಲ್ಲೇಕೆ ಅಂತಹ ಉದ್ಯೋಗಗಳು ಸೃಷ್ಟಿಯಾಗುತಿಲ್ಲ ... ? ಇದರ ಬಗ್ಗೆ ಒಂದು ಬಾರಿಯಾದರೂ ಯೋಚಿಸಿದ್ದೀರಾ ... ? ವಾಯು, ಜಲ , ರಸ್ತೆ ಸಾರಿಗೆ ಅಭಿವೃದ್ಧಿಯಿದ್ದರೂ ಮಂಗಳೂರಿನಲ್ಲೇಕೆ ಪ್ರತಿಷ್ಠಿತ ಕಂಪನಿಗಳು ಬಂಡವಾಳ ಹೂಡಿಕೆಗೆ ಹಿಂದೇಟು ಹಾಕುತ್ತಿವೆ ... ? ಕಾರಣ ಇಷ್ಟೇ ಮಂಗಳೂರು ಕೋಮು ಸೂಕ್ಷ್ಮ ಪ್ರದೇಶ . ಇಲ್ಲಿ ಮತೀಯ ಹಿಂಸಾರ ಹೆಚ್ಚಿದೆ , ಕೋಮು ದ್ವೇಷದ ವಿಷಯದಲ್ಲಿ ಸಾಕಷ್ಟು ದೊಂಬಿ ಗಲಾಟೆಗಳು ನಡೆಯುತ್ತಿದೆ . ಇಂತಹ ವಾತಾವರಣ ಸೃಷ್ಟಿಸಿದ್ದು ಯಾರು ... ? ನೀವುಗಳು ಹಾಗು ನಿಮ್ಮ ರಾಜಕಾರಣ ... !
 ಶಿಕ್ಷಣ ಕ್ಷೇತ್ರದಲ್ಲಿ ಮಂಗಳೂರು ಮುಂದುವರೆದಿದೆ . ಆದ್ರೆ ಅದು ನಿಮ್ಮಿಂದ ಅಲ್ಲ , ಇಂದು ಉಜಿರೆ, ಮೂಡಬಿದ್ರೆ , ನಿಟ್ಟೆ , ಮಣಿಪಾಲದಂತ ಹಳ್ಳಿಗಳು ದೇಶ ವಿದೇಶಗಳಲ್ಲಿ ಪ್ರಸಿದ್ದಿ ಪಡೆದಿದೆ ಎಂದರೆ ಅದಕ್ಕೆ ಕಾರಣ ಕರಾವಳಿಯ ಯಾವೊಬ್ಬ ರಾಜಕಾರಣಿಯೂ ಅಲ್ಲ , ಹೆಗ್ಗಡೆ , ಆಳ್ವ, ಹೆಗ್ಡೆ , ಪೈ ಅವರಿಂದ ಅದು ಸಾಧ್ಯವಾದದ್ದು . ನಿಮ್ಮಂತೆ ಅವರು ದ್ವೇಷ  ತುಂಬಿದ ಆಕ್ರೋಶ ಭರಿತ ಭಾಷಣ ಮಾಡಲಿಲ್ಲ , ಯುವಕರನ್ನು ಒಬ್ಬರ ಮೇಲೆ ಒಬ್ಬರನ್ನು ಎತ್ತಿ ಕಟ್ಟಲಿಲ್ಲ ಬದಲಾಗಿ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದರು , ದೇಶ ವಿದೇಶಗಳಲ್ಲಿ ಜಿಲ್ಲೆಯ ಹೆಸರು ಪಸರಿಸುವಂತೆ ಮಾಡಿದರು . ಆದ್ರೆ ಜಿಲ್ಲೆಯಿಂದ ಇಬ್ಬರು ಮುಖ್ಯ ಮಂತ್ರಿಗಳು , ಡಜನ್ ಗಟ್ಟಲೆ ಮಂತ್ರಿಗಳು ಕೇಂದ್ರ ಹಾಗು ರಾಜ್ಯ ಸರಕಾರದಲ್ಲಿ ಕಾರ್ಯ ನಿರ್ವಹಿಸಿದರೂ ಒಂದು ಐ ಐ ಟಿ ಯನ್ನು ಜಿಲ್ಲೆಗೆ ತರಲು ಇದುವರೆಗೆ ನಿಮ್ಮಿಂದ ಸಾಧ್ಯವಾಗಲಿಲ್ಲ . ಹಾಗಾದ್ರೆ ಎಲ್ಲಿ ಅಡಗಿದೆ ನಿಮ್ಮ ಅಭಿವೃದ್ಧಿಯ ಅಜೆಂಡಾ ... ? ಮತೀಯ ದ್ವೇಷದ ಮೂಲಕ ನೆತ್ತರು ಹರಿಸುವಲ್ಲಿ ಅದು ಕೊನೆಯಾಯಿತೇ ... ?
        ನಿಮ್ಮ ಗುಂಡಿಗೆಯಲ್ಲಿ ತಾಕತ್ತಿದ್ದರೆ, ಜನರ ಪರ ನಿಜವಾದ ಕಾಳಜಿ ಇದ್ದರೆ , ಹೊತ್ತಿ ಉರಿಯುತ್ತಿರುವ ಜಿಲ್ಲೆಯಲ್ಲಿ ಶಾಂತಿ ನೆಲೆಸುವಂತೆ ಮಾಡಿ . ಅಣ್ಣ ತಮ್ಮರಂತೆ ಅಕ್ಕ ಪಕ್ಕದ ಮನೆಯಲ್ಲಿರುವ ಹಿಂದೂ ಮುಸಲ್ಮಾನ ಸಹೋದರರು ಬೀದಿಗಿಳಿದು ಒಬ್ಬರನ್ನೊಬ್ಬರು ಕಡಿದು ಕೊಲ್ಲುವಂತೆ ಮಾಡದಿರಿ . ಬಡವರ ಮಕ್ಕಳ ನೆತ್ತರು ಹರಿಸಿ ಅವರ ಕುಟುಂಬದವರ ಕಣ್ಣೀರಿನಲ್ಲಿ ಅನ್ನ ಬೇಯಿಸುವ ಕೆಲಸ ಮಾಡದಿರಿ . ಪ್ರತಿಯೊಬ್ಬರಿಗೂ ಅವರ ಧರ್ಮದ ಬಗ್ಗೆ ಅಭಿಮಾನವಿರಬೇಕು , ಪ್ರೀತಿಯಿರಬೇಕು . ಅಂತಹ ಅಭಿಮಾನ ಹಾಗೂ ದೇಶ ಭಕ್ತಿಯನ್ನು ಯುವಕರಲ್ಲಿ ತುಂಬುವ ಕೆಲಸ ಮಾಡಿ ಹೊರತಾಗಿ ಅತಿರೇಕದ ಮತಾಂಧತೆಯನ್ನು ಯುವಕರಲ್ಲಿ ಹೊರಿಸಬೇಡಿ . ಅಧಿಕಾರ ಪಡೆಯಲು ಹಲವಾರು ದಾರಿಗಳಿವೆ, ಇನ್ನೊಬ್ಬರ ಸಾವಿನ ಮೂಲಕ ಅದನ್ನು ಪಡೆಯುವ ಸಾಹಸ ಮಾಡದಿರಿ . ನಿಮ್ಮ ಸಾವಿನ ಮನೆಯ ರಾಜಕಾರಣಕ್ಕೆ ಧಿಕ್ಕಾರವಿರಲಿ .. !

ರಾಜೇಶ್ ಶೆಟ್ಟಿ