Saturday, August 12, 2017

2019 ರ ಪ್ರಸವಕ್ಕೆ ವೇದನೆ ಪಡುತ್ತಿರುವ ಕಾಂಗ್ರೆಸ್ ಗೆ ಜೊತೆ ನಿಲ್ಲುವವರ್ಯಾರು ?




ದಶಕಗಳ ಆಚೆಗೆ ಈ ದೇಶದಲ್ಲಿ ಕಾಂಗ್ರೆಸ್ ಬಿಟ್ಟರೆ ಬೇರೆ ಯಾವ ಪಕ್ಷವೂ ಸ್ವತಂತ್ರವಾಗಿ ಅಧಿಕಾರ ನಡೆಸಲು ಸಾಧ್ಯವೇ ಇಲ್ಲ ಎಂಬ ರಾಜಕೀಯ ಪರಿಸ್ಥಿತಿಯೊಂದಿತ್ತು. ಅದು ನೆಹರೂ ಹಾಗೂ ಇಂದಿರಾ ಕಾಲದಿಂದಲೂ ನಡೆದು ಬಂದದ್ದಾಗಿತ್ತು. ಈ ದೇಶದ ಜನರಿಗೆ ಕೈ ಒಂದೇ ಸರ್ವಸ್ವವಾಗಿತ್ತು. ಕಾಂಗ್ರೆಸ್ ಎಂದರೆ ಸ್ವಾತಂತ್ರಕ್ಕಾಗಿ ಹೋರಾಡಿ ದೇಶಕ್ಕೆ ಸ್ವತಂತ್ರ ತಂದು ಕೊಟ್ಟ ಪಕ್ಷ , ಕಾಂಗ್ರೆಸ್ ಎಂದರೆ ನಮಗೆ ಸೂರು ಕಟ್ಟಿ ಕೊಂಡು ಸ್ಥಿರವಾಗಿ ನೆಲೆ ನಿಲ್ಲಲು ನೆರವಾದ ಪಕ್ಷ ಎಂಬ ಭಾವ ಹಿರಿ ಜೀವಗಳಲ್ಲಿ ಮನೆ ಮಾಡಿತ್ತು . ಪ್ರತಿ ಚುನಾವಣೆಯಲ್ಲೂ ಕಾಂಗ್ರೆಸ್ ಬಿಟ್ಟರೆ ಬೇರೆ ಅನ್ಯ ಆಯ್ಕೆಯೇ ಇಲ್ಲ ಎಂದು  ಜನ ಮತ್ತೆ ಮತ್ತೆ ಕಾಂಗ್ರೆಸ್ ಅನ್ನೇ ದೇಶ ಆಳಲು ಆಯ್ಕೆ ಮಾಡುತಿದ್ದರು. ಆಯ್ಕೆ ಮಾಡಿದ ಜನರ ಭಾವನೆಗಳಿಗೆ ಕಾಂಗ್ರೆಸ್ ಪಕ್ಷವು ದಶಕಗಳಲ್ಲಿ ನ್ಯಾಯ ಒದಗಿಸಿತೇ ಎನ್ನೋದು ಯಕ್ಷ ಪ್ರಶ್ನೆ.
 ಸ್ವಾತಂತ್ರ ಬಂದ  ನಂತರ ಈ ದೇಶವನ್ನು ಹೆಚ್ಚು ಕಾಲ ಆಳಿದ ಸರ್ಕಾರವೆಂದರೆ ಅದು ಕಾಂಗ್ರೆಸ್ ನೇತೃತ್ವದ ಯು ಪಿ ಎ ಸರಕಾರ . ಆದರೆ ಅದೇ ಕಾಂಗ್ರೆಸ್ ಇಂದು ತನ್ನ ಒಡನಾಡಿಗಳೊಂದಿಗೆ ಭಾರತದ ರಾಜ್ಯಗಳಲ್ಲಿ ಸ್ಥಿರ ನೆಲೆ ಕಂಡುಗೊಳ್ಳಲು ಹೆಣಗಾಡುತ್ತಿರುವುದು ವಿಪರ್ಯಾಸ. ಇದು ಕಾಂಗ್ರೆಸ್ ದಶಕಗಳ ಕಾಲ ನಡೆಸಿದ ದುರಾಡಳಿತ ಮತ್ತು ಪ್ರತಿ ಪಕ್ಷದ ಸಮರ್ಥ ನಾಯಕನೊಬ್ಬನನ್ನು ಎದುರಿಸಲು ಅನ್ಯ ನಾಯಕನೊಬ್ಬನನ್ನು ಬೆಳೆಯಲು ಬಿಡದೆ ಕುಟುಂಬ ರಾಜಕಾರಣಕ್ಕೆ ಮಣೆ ಹಾಕಿದುದರ  ಫಲ . ಕಳೆದ ಒಂದು ದಶಕದಲ್ಲಿ ಮನಮೋಹನ್ ಸಿಂಗ್ ಅವರನ್ನು ಪ್ರಧಾನಿ ಸ್ಥಾನದಲ್ಲಿ ಕೂರಿಸಿ ಆಡಳಿತ ನಡೆಸಿದ ಕಾಂಗ್ರೆಸ್ ಅಧಿ ನಾಯಕಿ ಸೋನಿಯಾ ಗಾಂಧಿಯವರು ಇಂದು ಗುಜಾರಾತ್ ನಲ್ಲಿ ತನ್ನ ಆಪ್ತನನ್ನು ಗೆಲ್ಲಿಸಿಕೊಡಲು ಪಟ್ಟ ಹರಸಾಹಸವನ್ನು ನಾವು ಕಂಡಿದ್ದೇವೆ. ಗೆಲ್ಲಲು ಸಾಕಷ್ಟು ಸಂಖ್ಯಾ ಬಲವಿದ್ದರೂ ತನ್ನದೇ ಪಕ್ಷದ ಶಾಸಕರನ್ನು ಹಿಡಿದಿಟ್ಟುಕೊಳ್ಳಲಾಗದೆ ರೆಸಾರ್ಟ್ ವಾಸ್ತವ್ಯದ ಮೂಲಕ ಕಡೆಗೂ ಒಂದು ಸ್ಥಾನ ಗೆದ್ದ ಕಾಂಗ್ರೆಸ್ ಅದನ್ನೇ ಜಯಭೇರಿ ಎಂದು ಭಾವಿಸಿ ಹಿರಿ ಹಿರಿ ಹಿಗ್ಗುವುದನ್ನು ನೋಡುತಿದ್ದರೆ ಕಾಂಗ್ರೆಸ್ ಪಕ್ಷವು ಶೀಘ್ರವಾಗಿ ಇತಿಹಾಸದ ಪುಟಗಳಲ್ಲಿ ಕಾಣಲ್ಪಡುವುದರಲ್ಲಿ ಸಂಶಯವಿಲ್ಲ . ಇಂತಹದೊಂದು ಪಕ್ಷ ಹೀಗೆ ಇತ್ತು , ಇವರು ಮುನ್ನಡೆಸಿದರು , ಇಂತಹ ಕಾರಣಗಳಿಂದ ದೇಶದಲ್ಲಿ ಹೇಗೆ ನಿರ್ನಾಮವಾಯಿತು ಎಂಬುದನ್ನು ಇತಿಹಾಸಗಳಿಂದ ತಿಳಿಯಲ್ಪಡುವ ಸಂಧರ್ಭ ಬರಬಹುದು .
 ದಶಕಗಳ ಕಾಲ ಹಗರಣಗಳಲ್ಲೇ ಮಿಂದೆದ್ದ ಕಾಂಗ್ರೆಸ್ ೨೦೧೪ ಕ್ಕೆ ಹೇಗೆ ಪ್ರತಿ ಪಕ್ಷ ಸ್ಥಾನವನ್ನೂ ಪಡೆದುಕೊಳ್ಳಲೂ ಅನರ್ಹವಾಯಿತೋ ಅದಕ್ಕಿಂತ ದುಸ್ಥಿತಿ ೨೦೧೯ರಲ್ಲಿ ಬರಬಹುದು . ಆ ಮುಜುಗರವನ್ನು ತಪ್ಪಿಸಲು ಕಾಂಗ್ರೆಸ್ ಇನ್ನಿಲ್ಲದಂತೆ ಕಸರತ್ತು ನಡೆಸುತ್ತಿದೆ . ಪ್ರಧಾನಿ ಮೋದಿಯವರನ್ನು ಎದುರಿಸಲು ಸಮರ್ಥ ನಾಯಕರಿಲ್ಲ, ಕಾಂಗ್ರೆಸ್ ಪಕ್ಷದ ಆಸ್ತಿತ್ವದ ಪ್ರಶ್ನೆ ಎದುರಾಗಿದೆ ಎಂದು ಹಿರಿಯ ಕಾಂಗ್ರೆಸ್  ನಾಯಕರಾದ  ಜೈ ರಾಮ್ ರಮೇಶ್ ಅವರು ಹಾಗೂ ಮಣಿಶಂಕರ್ ಅಯ್ಯರ್ ಅವರು ಈಗಾಗಲೇ ಒಪ್ಪಿಕೊಂಡಿದ್ದಾರೆ. ಕಾಂಗ್ರೆಸ್  ಸ್ವಂತ ಬಲದಲ್ಲಿ ಇನ್ನೆಂದೂ ಈ ದೇಶದಲ್ಲಿ ಅಧಿಕಾರ ಹಿಡಿಯುವುದು ಕನಸು ಎಂದು ಅರಿವಾದಾಗ ಅದು ಜಾತ್ಯಾತೀತ ಮುಖವಾಡ ಹೊಂದಿರುವ ಪ್ರಾದೇಶಿಕ ಪಕ್ಷಗಳೊಂದಿಗೆ ಸಖ್ಯ ಬೆಳೆಸಿ ಬಿ ಜೆ ಪಿ ಯನ್ನು ಎದುರಿಸಲು ಸಿದ್ಧಗೊಂಡಿರುವುದು ವಿಪರ್ಯಾಸ .
೨೦೧೪ ರ ನಂತರ ನಡೆದ ಚುನಾವಣೆಗಳ ಫಲಿತಾಂಶ ಗಮನಿಸಿದರೆ ಕಾಂಗ್ರೆಸ್ ಗೆ ತೃಪ್ತಿದಾಯಕ ಫಲಿತಾಂಶ ಬಂದಿರುವುದೆಂದರೆ ಪಂಜಾಬ್ ನಲ್ಲಿ ಮಾತ್ರ . ಉಳಿದಂತೆ ಮಹಾರಾಷ್ಟ್ರ , ಉತ್ತರಕಾಂಡ , ಅಸ್ಸಾಂ , ಗೋವಾ , ಉತ್ತರ ಪ್ರದೇಶ ಮುಂತಾದ ರಾಜ್ಯಗಳಲ್ಲಿ ಹೇಳ ಹೆಸರಿಲ್ಲದಂತೆ ಕಾಂಗ್ರೆಸ್ ನಿರ್ನಾಮವಾಗಿದೆ. ಇನ್ನು ಉಳಿದ ರಾಜ್ಯಗಳಲ್ಲಿ ಕಾಂಗ್ರೆಸ್ ನ ಹಿರಿಯ ನಾಯಕರು  ಪಕ್ಷದ ನಾಯಕತ್ವ ವಿರೋಧಿಸಿ ಪಕ್ಷಾಂತರ ಮಾಡುತ್ತಿದ್ದಾರೆ. ನಾಯಕತ್ವ ವಿರೋಧಿಸುವುದಕ್ಕೂ ಮೇಲೂ ಅವರಿಗೆ ಪಕ್ಷದ ಅಳಿವು ಉಳಿವುಗಳ ಗೊಂದಲವಿದೆ. ಇನ್ನು ಪ್ರತಿ ಪಕ್ಷಗಳೂ ಕೂಡ ಕಾಂಗ್ರೆಸ್ನೊಂದಿಗೆ ಸಖ್ಯ ಬೆಳೆಸಲು ಹಿಂದೇಟು ಹಾಕುತ್ತಿವೆ. ಇತ್ತೀಚಿನ ಬೆಳವಣಿಗೆಯಲ್ಲಿ ಬಿಹಾರದ ನಿತೀಶ್ ಕುಮಾರ್ ಅವರು ಕಾಂಗ್ರೆಸ್ ಮತ್ತು ಜೆ ಡಿ ಯು ಸಖ್ಯ ತೊರೆದು ಬಿ ಜೆ ಪಿ ಯೊಂದಿಗೆ ಕೈ ಜೋಡಿಸಿರುವುದು ಇದಕ್ಕೆ ಉತ್ತಮ ಉದಾಹರಣೆ. ಇನ್ನು ಎನ್ ಸಿ ಪಿ ಯೂ ಕೂಡ ನಿನ್ನೆಯ ಪ್ರತಿ ಪಕ್ಷಗಳ ಸಭಯಲ್ಲಿ ಪಾಲ್ಗೊಳ್ಳದೆ ಕೈ ಕೊಟ್ಟಿರೋದು ಕಾಂಗ್ರೆಸ್ ಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಇನ್ನು ಉಳಿದಂತೆ ಸಿ ಪಿ ಎಂ ಸ್ವತಂತ್ರ ಸ್ಪರ್ಧೆಯ ಮಾತುಗಳನ್ನಾಡುತ್ತಿದೆ. ಸಮಜಾವಾದಿ ಪಕ್ಷವು ಎರಡು ಹೋಳಾಗಿದೆ , ಮಾಯಾವತಿ ನೇತೃತ್ವದ ಬಿ ಎಸ್ ಪಿ ಉತ್ತರ ಪ್ರದೇಶದಲ್ಲಿ ಆಸ್ತಿತ್ವಕ್ಕಾಗಿ ಪರದಾಡುತ್ತಿದೆ . ಜೊತೆಗಿರುವುದು ಕಾಂಗ್ರೆಸ್ನಿಂದ ಮುನಿಸಿ ದೂರವಾಗಿ ಸ್ವತಂತ್ರ ಪಕ್ಷ ಕಟ್ಟಿ ಅಧಿಕಾರ ನಡೆಸುತ್ತಿರುವ ಮಮತಾ ಬ್ಯಾನರ್ಜಿ ಮಾತ್ರ . ಈಗಾಗಲೇ ಹಲವರೂ ಪ್ರತಿ ಪಕ್ಷಗಳ ನಾಯಕರು ಹೇಳಿರುವಂತೆ ೨೦೧೯ ಕ್ಕೆ ಬಿ ಜೆ ಪಿ ಎದುರು ಗೆಲ್ಲುವುದಕ್ಕೂ ಮೊದಲು ಮೋದಿಜಿಯವರನ್ನು ಎದುರಿಸಲು ಸಮರ್ಥ ಹಾಗೂ ಪರ್ಯಾಯ ನಾಯಕನೊಬ್ಬನನ್ನು ಹುಡುಕಬೇಕು . ಆಗ ಮಾತ್ರ ದೇಶದಲ್ಲಿ ಕಾಂಗ್ರೆಸ್ ನೆಲೆ ಕಂಡು ಕೊಳ್ಳಬಹುದು . ೨೦೧೯ ರ ಪ್ರಸವಕ್ಕೆ ವೇದನೆ ಪಡುತ್ತಿರುವ ಕಾಂಗ್ರೆಸ್ ಅನ್ನು ಕೈ ಹಿಡಿದು ನಡೆಸುವರಾರು ಹಾಗೂ ಜೊತೆ ನಿಲ್ಲುವವರ್ಯಾರು ಎಂದು ಕಾದು ನೋಡಬೇಕಾಗಿದೆ .

ರಾಜೇಶ್ ಶೆಟ್ಟಿ



Friday, July 7, 2017

ಅವರ ಕಣ್ಣೀರಿನಲ್ಲಿ ಅನ್ನ ಬೇಯಿಸುವ ಕೆಲಸ ಮಾಡದಿರಿ.... !

ಕರಾವಳಿಯ ರಾಜಕಾರಣಿಗಳಿಗೆ ,
         ಇನ್ನೇನು ರಾಜ್ಯದ ವಿಧಾನ ಸಭಾ ಚುನಾವಣೆ ಹತ್ತಿರವಾಯಿತು , ಮತ್ತೆ ನಿಮ್ಮ ಸ್ಥಾನ ಗಟ್ಟಿಗೊಳಿಸಬೇಕು , ಜನರನ್ನು ಮರಳು ಮಾಡಬೇಕು , ಮತ ಯಾಚಿಸಬೇಕು . ಆಡಳಿತ ಪಕ್ಷದಲ್ಲಿದ್ದರೂ ಕಿತ್ತು ಗುಡ್ಡೆ ಹಾಕಿದ ಯಾವ ಸಾಧನೆಯೂ ಇಲ್ಲ. ವಿರೋಧ ಪಕ್ಷದಲ್ಲಿದ್ದು ಹೇಳಿ ಕೊಳ್ಳುವ ಘನ ಕಾರ್ಯ ಯಾವುದೂ ಇಲ್ಲ. ಲೋಕ ಸಭೆಯಲ್ಲಿ ಹೇಗೋ ಅವರಿವರ ಹೆಸರು ಹೇಳಿ ಅಧಿಕಾರ ಪಡೆದು ಕೊಂಡೆವು. ಆದರೆ ಈಗೇನು ಮಾಡುವುದು ...? ಎಂದು ಯೋಚಿಸಿದಾಗ ನಿಮ್ಮ ತಲೆಯಲ್ಲಿ ಬಂದದ್ದು ಮತ್ತೆ ಅದೇ ನಿಮ್ಮ ಹಿಂದಿನ ಚಾಳಿ,  ಹಿಂದೂ ಮುಸ್ಲಿಂ .... ! ಸಹೋದರರಂತೆ ಇದ್ದ ಹಿಂದೂ ಮುಸಲ್ಮಾನರ ನಡುವೆ ವಿಷ ಬೀಜ ಬಿತ್ತಿ ಅವರ ನಡುವೆ ನೆತ್ತರು ಹರಿಸಿ, ಆ ನೆತ್ತರ ನಡುವೆ ನಿಮ್ಮ ಬೆಳೆಯನ್ನು ಬೆಳೆಯುವ ಹುನ್ನಾರ . ಇಲ್ಲಿ ಹಿಂದೂ ಸತ್ತರೆ ಬಿ ಜೆ ಪಿ ಗೆ ಲಾಭ , ಮುಸಲ್ಮಾನ ಸತ್ತರೆ ಕಾಂಗ್ರೆಸ್ ಹಾಗೂ ಎಡ ಪಕ್ಷಗಳಿಗೆ ಲಾಭ. ಇದು ನಿಮ್ಮ ಚುನಾವಣಾ ರಣ ತಂತ್ರದ ಒಂದು ಭಾಗ. ಬಡವರ ಮನೆಯ ಮಗನ ಹೆಣದ ಮುಂದೆ ನಾಲ್ಕು ಹನಿ ಕಣ್ಣೀರು ಹರಿಸಿ, ಜೊತೆಗಿರುವ ಆವೇಶ ಭರಿತ ಯುವಕರೊಂದಿಗೆ ರಸ್ತೆ ತಡೆ ಮಾಡಿ, ಉರಿವ ಬೆಂಕಿಗೆ ತುಪ್ಪ ಸುರಿದು ಮತ್ತೊಂದು ಹೆಣ ಬೀಳೋವರೆಗೆ ನೀವು ವಿರಮಿಸಲಾರಿರಿ . ನಿಮಗೆ ಬೇಕಿರುವುದು ನಿಮ್ಮ ಕ್ಷೇತ್ರದ ಅಭಿವೃದ್ದಿಯಲ್ಲ , ಬದಲಾಗಿ ನಿಮ್ಮ ಪಕ್ಷದ ನಿಮ್ಮ ಬೆಂಬಲಿಗರ ಸಾವು , ಸಾವಿನ ಮನೆಯ ರಾಜಕೀಯ . ಒಬ್ಬ ಬೆಂಕಿ ಹಚ್ಚುವ ಮಾತು ಆಡಿದರೆ ಇನ್ನೊಬ್ಬ ಜೈಲಿಗಟ್ಟುವ ಮಾತು, ದ್ವೇಷ ತುಂಬಿದ ಜಾಗದಲ್ಲಿ ಶಾಂತಿಯ ಮಾತು ನಿಮ್ಮ ಬಾಯಿಯಿಂದ ಎಂದೂ ಬರಲಾರದು. ಅದು ನಿಮಗೆ ಬೇಕಾಗಿಯೂ ಇಲ್ಲ .
  ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ನಿಮ್ಮಂತಹ ಸೋಗಲಾಡಿ ರಾಜಕಾರಣಿಗಳನ್ನು ಆರಿಸಿದ ನಾವು ನಿಜವಾಗಿಯೂ ಮುಠಾಳರು .... ! ಬುದ್ದಿವಂತರೆದು ಅನಿಸಿಕೊಂಡವರು ನಾವೇನಾ ಎಂಬ ಅನುಮಾನಗಳು ನಮ್ಮಲ್ಲೇ ಕಾಡಲು ಶುರುವಾಗುತ್ತಿದೆ. ನಮ್ಮ ಜಿಲ್ಲೆಗೆ ಒಂದು ಒಳ್ಳೆಯ ಹೆಸರಿದೆ ಎಂದಾದರೆ ಖಂಡಿತ ಅದು ನಿಮ್ಮಿಂದ ಅಲ್ಲ . ಅದಕ್ಕಾಗಿ ನಿಮ್ಮ ತಾಕತ್ತನ್ನು ನೀವು ಎಲ್ಲಿಯೂ ತೋರಿಸಿಲ್ಲ. ನೀವು ತೋರಿಸಿರುವುದು ಕೇವಲ ಚುನಾವಣಾ ಸಂದರ್ಭದಲ್ಲಿ ಇಂತಹ ದೊಂಬಿ ಗಲಾಟೆಯಲ್ಲಿ ಬೆಂಕಿ ಹಚ್ಚುವಲ್ಲಿ ಮಾತ್ರ . ಜಿಲ್ಲೆಯ ಜೀವ ನಾಡಿ ನೇತ್ರಾವತಿ ತಿರುವು ಯೋಜನೆಯನ್ನು ಸರಕಾರ ಜಾರಿ ಮಾಡ ಹೊರಟಾಗ ಎಷ್ಟು ಜನ ಜನ ಪ್ರತಿನಿಧಿಗಳು ರಸ್ತೆಗಿಳಿದು ಹೋರಾಟ ಮಾಡಿದ್ದೀರಿ .. ? ಎಷ್ಟು ಜನ ಜನ ಪ್ರತಿನಿಧಿಗಳು ಪ್ರತಿಭಟನೆಯಲ್ಲಿ ಕರಾವಳಿಯ ಜನರಿಗೆ ಸಾಥ್ ನೀಡಿದ್ದೀರಿ ? ಅಧಿಕಾರದಲ್ಲಿದ್ದ ಮಂತ್ರಿ ಮಹೋದಯರು ನಿಮ್ಮ ಸರಕಾರದ ಯೋಜನೆ ಜಿಲ್ಲೆಯ ಪಾಲಿಗೆ ಮರಣ ಶಾಸನವಾಗುತ್ತಿದೆ ಎಂದು ಅರಿವಿದ್ದರೂ ಅದನ್ನು ಪ್ರತಿಭಟಿಸುವ ಗಂಡಸುತನ ತೋರಲಿಲ್ಲ ಯಾಕೆ .. ? ನಾನು ಹುಲಿ ವಂಶದವನು ಎಂದು ಬೊಬ್ಬಿರಿದವರು ಇಲಿಯಂತೆ ಬಿಲ ಸೇರಿದ್ದೇಕೆ .. ? ಇದಕ್ಕೆಲ್ಲ ನಿಮ್ಮ ಬಳಿ ಉತ್ತರವಿಲ್ಲ , ಕಾರಣ ನಿಮ್ಮ ರಾಜಕಾರಣ ನಿಂತಿರುವುದು ಜಿಲ್ಲೆಯ ಉಳಿವಿನಲ್ಲಿ ಅಲ್ಲ ... ! ಬದಲ್ಲಾಗಿ ಅದು ಕೋಮು ಸಂಘರ್ಷದ ಲಾಭದಲ್ಲಿ .
   ಒಂದು ಮಾತು ನೆನಪಿಡಿ ಇಂದು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಾವಿರಾರು ಯುವಕ ಯುವತಿಯರು ಹೊರ ರಾಜ್ಯ, ದೇಶಗಳಿಗೆ ಕೆಲಸಕ್ಕಾಗಿ  ಅಲೆದಾಡುತಿದ್ದಾರೆ , ಎಲ್ಲಾ ಸಂಪತ್ತು, ಸೌಕರ್ಯಗಳು ಇದ್ದರೂ ನಮ್ಮವರೇಕೆ ಹೊರ ಹೋಗಿ ಉದ್ಯೋಗವಾರಸುತಿದ್ದರೆ ... ? ನಮ್ಮಲ್ಲೇಕೆ ಅಂತಹ ಉದ್ಯೋಗಗಳು ಸೃಷ್ಟಿಯಾಗುತಿಲ್ಲ ... ? ಇದರ ಬಗ್ಗೆ ಒಂದು ಬಾರಿಯಾದರೂ ಯೋಚಿಸಿದ್ದೀರಾ ... ? ವಾಯು, ಜಲ , ರಸ್ತೆ ಸಾರಿಗೆ ಅಭಿವೃದ್ಧಿಯಿದ್ದರೂ ಮಂಗಳೂರಿನಲ್ಲೇಕೆ ಪ್ರತಿಷ್ಠಿತ ಕಂಪನಿಗಳು ಬಂಡವಾಳ ಹೂಡಿಕೆಗೆ ಹಿಂದೇಟು ಹಾಕುತ್ತಿವೆ ... ? ಕಾರಣ ಇಷ್ಟೇ ಮಂಗಳೂರು ಕೋಮು ಸೂಕ್ಷ್ಮ ಪ್ರದೇಶ . ಇಲ್ಲಿ ಮತೀಯ ಹಿಂಸಾರ ಹೆಚ್ಚಿದೆ , ಕೋಮು ದ್ವೇಷದ ವಿಷಯದಲ್ಲಿ ಸಾಕಷ್ಟು ದೊಂಬಿ ಗಲಾಟೆಗಳು ನಡೆಯುತ್ತಿದೆ . ಇಂತಹ ವಾತಾವರಣ ಸೃಷ್ಟಿಸಿದ್ದು ಯಾರು ... ? ನೀವುಗಳು ಹಾಗು ನಿಮ್ಮ ರಾಜಕಾರಣ ... !
 ಶಿಕ್ಷಣ ಕ್ಷೇತ್ರದಲ್ಲಿ ಮಂಗಳೂರು ಮುಂದುವರೆದಿದೆ . ಆದ್ರೆ ಅದು ನಿಮ್ಮಿಂದ ಅಲ್ಲ , ಇಂದು ಉಜಿರೆ, ಮೂಡಬಿದ್ರೆ , ನಿಟ್ಟೆ , ಮಣಿಪಾಲದಂತ ಹಳ್ಳಿಗಳು ದೇಶ ವಿದೇಶಗಳಲ್ಲಿ ಪ್ರಸಿದ್ದಿ ಪಡೆದಿದೆ ಎಂದರೆ ಅದಕ್ಕೆ ಕಾರಣ ಕರಾವಳಿಯ ಯಾವೊಬ್ಬ ರಾಜಕಾರಣಿಯೂ ಅಲ್ಲ , ಹೆಗ್ಗಡೆ , ಆಳ್ವ, ಹೆಗ್ಡೆ , ಪೈ ಅವರಿಂದ ಅದು ಸಾಧ್ಯವಾದದ್ದು . ನಿಮ್ಮಂತೆ ಅವರು ದ್ವೇಷ  ತುಂಬಿದ ಆಕ್ರೋಶ ಭರಿತ ಭಾಷಣ ಮಾಡಲಿಲ್ಲ , ಯುವಕರನ್ನು ಒಬ್ಬರ ಮೇಲೆ ಒಬ್ಬರನ್ನು ಎತ್ತಿ ಕಟ್ಟಲಿಲ್ಲ ಬದಲಾಗಿ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದರು , ದೇಶ ವಿದೇಶಗಳಲ್ಲಿ ಜಿಲ್ಲೆಯ ಹೆಸರು ಪಸರಿಸುವಂತೆ ಮಾಡಿದರು . ಆದ್ರೆ ಜಿಲ್ಲೆಯಿಂದ ಇಬ್ಬರು ಮುಖ್ಯ ಮಂತ್ರಿಗಳು , ಡಜನ್ ಗಟ್ಟಲೆ ಮಂತ್ರಿಗಳು ಕೇಂದ್ರ ಹಾಗು ರಾಜ್ಯ ಸರಕಾರದಲ್ಲಿ ಕಾರ್ಯ ನಿರ್ವಹಿಸಿದರೂ ಒಂದು ಐ ಐ ಟಿ ಯನ್ನು ಜಿಲ್ಲೆಗೆ ತರಲು ಇದುವರೆಗೆ ನಿಮ್ಮಿಂದ ಸಾಧ್ಯವಾಗಲಿಲ್ಲ . ಹಾಗಾದ್ರೆ ಎಲ್ಲಿ ಅಡಗಿದೆ ನಿಮ್ಮ ಅಭಿವೃದ್ಧಿಯ ಅಜೆಂಡಾ ... ? ಮತೀಯ ದ್ವೇಷದ ಮೂಲಕ ನೆತ್ತರು ಹರಿಸುವಲ್ಲಿ ಅದು ಕೊನೆಯಾಯಿತೇ ... ?
        ನಿಮ್ಮ ಗುಂಡಿಗೆಯಲ್ಲಿ ತಾಕತ್ತಿದ್ದರೆ, ಜನರ ಪರ ನಿಜವಾದ ಕಾಳಜಿ ಇದ್ದರೆ , ಹೊತ್ತಿ ಉರಿಯುತ್ತಿರುವ ಜಿಲ್ಲೆಯಲ್ಲಿ ಶಾಂತಿ ನೆಲೆಸುವಂತೆ ಮಾಡಿ . ಅಣ್ಣ ತಮ್ಮರಂತೆ ಅಕ್ಕ ಪಕ್ಕದ ಮನೆಯಲ್ಲಿರುವ ಹಿಂದೂ ಮುಸಲ್ಮಾನ ಸಹೋದರರು ಬೀದಿಗಿಳಿದು ಒಬ್ಬರನ್ನೊಬ್ಬರು ಕಡಿದು ಕೊಲ್ಲುವಂತೆ ಮಾಡದಿರಿ . ಬಡವರ ಮಕ್ಕಳ ನೆತ್ತರು ಹರಿಸಿ ಅವರ ಕುಟುಂಬದವರ ಕಣ್ಣೀರಿನಲ್ಲಿ ಅನ್ನ ಬೇಯಿಸುವ ಕೆಲಸ ಮಾಡದಿರಿ . ಪ್ರತಿಯೊಬ್ಬರಿಗೂ ಅವರ ಧರ್ಮದ ಬಗ್ಗೆ ಅಭಿಮಾನವಿರಬೇಕು , ಪ್ರೀತಿಯಿರಬೇಕು . ಅಂತಹ ಅಭಿಮಾನ ಹಾಗೂ ದೇಶ ಭಕ್ತಿಯನ್ನು ಯುವಕರಲ್ಲಿ ತುಂಬುವ ಕೆಲಸ ಮಾಡಿ ಹೊರತಾಗಿ ಅತಿರೇಕದ ಮತಾಂಧತೆಯನ್ನು ಯುವಕರಲ್ಲಿ ಹೊರಿಸಬೇಡಿ . ಅಧಿಕಾರ ಪಡೆಯಲು ಹಲವಾರು ದಾರಿಗಳಿವೆ, ಇನ್ನೊಬ್ಬರ ಸಾವಿನ ಮೂಲಕ ಅದನ್ನು ಪಡೆಯುವ ಸಾಹಸ ಮಾಡದಿರಿ . ನಿಮ್ಮ ಸಾವಿನ ಮನೆಯ ರಾಜಕಾರಣಕ್ಕೆ ಧಿಕ್ಕಾರವಿರಲಿ .. !

ರಾಜೇಶ್ ಶೆಟ್ಟಿ